ಮೈಸೂರು : ಜಿಲ್ಲೆಯ ಸರಸ್ವತಿಪುರಂ ವ್ಯಾಪ್ತಿಯಲ್ಲಿ 30 ವರ್ಷದ ಗೃಹಿಣಿಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸಂಧ್ಯಾ ಎಂದು ಗುರುತಿಸಲಾಗಿದ್ದು, ಅವರು ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿಯಾಗಿದ್ದಾರೆ ಎಂದು ತಿಳದುಬಂದಿದೆ.
ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಮೀಪದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಸಂಧ್ಯಾ ಅವರನ್ನು ಟೀಕೆ ಲೇಔಟ್ ನಿವಾಸಿ ಮಹದೇವ್ ಅವರ ಪುತ್ರ ಅಕ್ಷಯ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೀಗ ಸಂಧ್ಯಾ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ, ಅವರ ಪೋಷಕರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಪತಿ ಹಾಗೂ ಕುಟುಂಬದವರೊಂದಿಗೆ ಉಂಟಾಗುತ್ತಿದ್ದ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ಟೋಯಿಂಗ್ ವಾಹನ-ಆಟೋ ಮಧ್ಯೆ ಭೀಕರ ಡಿಕ್ಕಿ ; ಮೂವರಿಗೆ ಗಾಯ



















