ಬೆಂಗಳೂರು : ರಾಜ್ಯದಲ್ಲಿ ನಿರಂತರ ಮಳೆಯ ಪರಿಣಾಮ ತರಕಾರಿ ದರಗಳು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಟೊಮೆಟೊ, ಬದನೆಕಾಯಿ, ಬೀನ್ಸ್, ಹಸಿಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಕಳೆದ ಕೆಲ ದಿನಗಳಲ್ಲಿ ಹೆಚ್ಚಾಗಿದೆ.
ಮಳೆಯಿಂದ ಬೆಳೆ ಹಾನಿಯಾಗಿರುವುದು ಹಾಗೂ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ರೈತರಿಂದ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದ್ದರೂ, ಬೆಲೆ ಏರಿಕೆಯ ಸಂಪೂರ್ಣ ಲಾಭ ರೈತರಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಅಡಿಗೆ ಮನೆಯ ಬಜೆಟ್ ಹೆಚ್ಚಿಸಿರುವ ಈ ಬೆಲೆ ಏರಿಕೆಯಲ್ಲಿ ಟೊಮೆಟೊ ದರವೇ ಅತಿದೊಡ್ಡ ಜಿಗಿತ ಕಂಡಿದೆ. ಕೆಜಿಗೆ ₹40 ಇದ್ದ ಟೊಮೆಟೊ ಈಗ ₹62ರಿಂದ ₹67ಕ್ಕೆ ಏರಿಕೆಯಾಗಿದೆ. ಬಿಳಿ ಬದನೆಕಾಯಿ ₹60ರಿಂದ ₹80ಕ್ಕೆ, ಗುಂಡು ಬದನೆಕಾಯಿ ₹50ರಿಂದ ₹66ಕ್ಕೆ, ಬೆಣ್ಣೆ ಮೆಣಸಿನಕಾಯಿ ಹಾಗೂ ಗೋರಿಕಾಯಿ ₹55ರಿಂದ ₹72ಕ್ಕೆ ಏರಿಕೆಯಾಗಿದೆ. ಬೀಟ್‌ರೂಟ್ ₹40ರಿಂದ ₹50ಕ್ಕೆ, ಎಲೆಕೋಸು ₹35ರಿಂದ ₹45ಕ್ಕೆ, ಹೂಕೋಸು ₹40ರಿಂದ ₹50ಕ್ಕೆ ಹಾಗೂ ನುಗ್ಗೆಕಾಯಿ ₹35ರಿಂದ ₹48ಕ್ಕೆ ತಲುಪಿದೆ.
ಇನ್ನು ಹಸಿಮೆಣಸಿನಕಾಯಿ ₹50ರಿಂದ ₹70ಕ್ಕೆ, ಪಾಲಕ್ ಸೊಪ್ಪು ₹40ರಿಂದ ₹55ಕ್ಕೆ, ಮಂಡ್ಯ ಸೊಪ್ಪು ₹100ರಿಂದ ₹130ಕ್ಕೆ ಹಾಗೂ ಸಬ್ಬಸಿಗೆ ಸೊಪ್ಪು ₹90ರಿಂದ ₹110ಕ್ಕೆ ಏರಿಕೆಯಾಗಿದೆ. ಮೊಟ್ಟೆಯ ದರವೂ ಒಂದಕ್ಕೆ ₹6ರಿಂದ ₹7ಕ್ಕೆ ಹೆಚ್ಚಳ ಕಂಡಿದೆ. ಎಲಕ್ಕಿ ಬಾಳೆ ದರ ಕೆಜಿಗೆ ₹65ರಿಂದ ₹78–80ಕ್ಕೆ ತಲುಪಿದೆ. ಮಳೆ ಮುಂದುವರಿದರೆ ತರಕಾರಿ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹಾಗೂ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಗ್ರಾಹಕರ ಅಡಿಗೆ ಮನೆಯ ವೆಚ್ಚ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಮಳೆ ; ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ


















