ಬೆಂಗಳೂರು : ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದ್ದರೂ ಇನ್ನೂ ಪಾಲಿಕೆಯ ಸುಪರ್ದಿಗೆ ಬಾರದ ಹಾಗೂ ಪ್ರಭಾವಿ ನೆಲಗಳ್ಳರ ಕಬಳಿಕೆ ಯತ್ನಕ್ಕೆ ಒಳಗಾಗಿರುವ ₹100 ಕೋಟಿಗೂ ಅಧಿಕ ಮೌಲ್ಯದ ಎರಡು ಅಮೂಲ್ಯ ಪಾಲಿಕೆ ಸ್ವತ್ತುಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಪೇಟೆಗೆ ಹೊಂದಿಕೊಂಡಿರುವ ಅಂಚೆಪೇಟೆಯ “ರಜತಾ ಕಾಂಪ್ಲೆಕ್ಸ್” ಕಟ್ಟಡವು ಪಾಲಿಕೆಯ ಸ್ವತ್ತಾಗಿದ್ದು, ಸುಮಾರು 20,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಈ ಕಟ್ಟಡದ ನೆಲ ಮಹಡಿಯನ್ನು ಗುತ್ತಿಗೆಗೆ ನೀಡಲಾಗಿದ್ದು, ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳಾಗಿದ್ದರೂ ಮಳಿಗೆಗಳನ್ನು ಖಾಲಿ ಮಾಡದೆ ಕೆಲವರು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.

ರಜತಾ ಕಾಂಪ್ಲೆಕ್ಸ್‌ನ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಸರ್ಕಾರಿ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದ್ದು, ನೆಲ ಮಹಡಿಯಲ್ಲಿರುವ ಮಳಿಗೆಗಳನ್ನು ಕೆಲವರು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. ಈಗಾಗಲೇ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಲ್ಲಿರುವ ಈ ಮಳಿಗೆಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇನ್ನೊಂದೆಡೆ, ಚಿಕ್ಕಪೇಟೆಗೆ ಹೊಂದಿಕೊಂಡಿರುವ ಮಾಮೂಲುಪೇಟೆಯ “ಮಹಾರಾಜ ಪ್ಲಾಜಾ” ವಾಣಿಜ್ಯ ಕಟ್ಟಡವೂ ಪಾಲಿಕೆಯ ಸ್ವತ್ತಾಗಿದ್ದು, ಸುಮಾರು 25,000 ಚದರ ಅಡಿಗೂ ಅಧಿಕ ವಿಸ್ತೀರ್ಣ ಹೊಂದಿದೆ. ಈ ಕಟ್ಟಡದ ಮೊದಲ ಹಾಗೂ ಎರಡನೇ ಮಹಡಿಗಳಲ್ಲಿ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ನೆಲ ಮಹಡಿಯ ಹಲವು ಮಳಿಗೆಗಳನ್ನು ಕೆಲ ಅತಿಕ್ರಮಣಕಾರರು ಹಲವು ವರ್ಷಗಳಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಅತಿಕ್ರಮಿಸಿಕೊಂಡಿರುವ ಮಳಿಗೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಕಾನೂನುಬಾಹಿರ ಪ್ರಕ್ರಿಯೆಗೂ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಈ ಎರಡೂ ಪಾಲಿಕೆ ಸ್ವತ್ತುಗಳ ಒಟ್ಟು ಮಾರುಕಟ್ಟೆ ಮೌಲ್ಯ ₹100 ಕೋಟಿಗೂ ಅಧಿಕವಾಗಿದ್ದು, ಗುತ್ತಿಗೆ ಅವಧಿ ಮುಗಿದಿದ್ದರೂ ಮಳಿಗೆಗಳನ್ನು ಖಾಲಿ ಮಾಡದೆ ತಮ್ಮ ವಶದಲ್ಲೇ ಉಳಿಸಿಕೊಂಡಿರುವ ಅತಿಕ್ರಮಣಕಾರರನ್ನು ತಕ್ಷಣ ತೆರವುಗೊಳಿಸಿ, ಅಮೂಲ್ಯ ಆಸ್ತಿಗಳನ್ನು ಪಾಲಿಕೆಯ ವಶಕ್ಕೆ ಪಡೆಯುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಎನ್.ಆರ್. ರಮೇಶ್ ಮನವಿ ಮಾಡಿದ್ದಾರೆ.
ಇದೇ ವೇಳೆ, ಈ ಎರಡು ಆಸ್ತಿಗಳಲ್ಲಿನ ಅತಿಕ್ರಮಣಕ್ಕೆ ಪಾಲಿಕೆಯ ಗಾಂಧಿನಗರ ವಿಭಾಗದ ಕಂದಾಯ ಇಲಾಖೆಯಲ್ಲಿ ಕಳೆದ 7-8 ವರ್ಷಗಳಿಂದ ಕಾರ್ಯನಿರ್ವಹಿಸಿರುವ ಕೆಲ ಅಧಿಕಾರಿಗಳು ಮತ್ತು ನೌಕರರು ಕಾನೂನುಬಾಹಿರ ಸಹಕಾರ ನೀಡಿರುವ ಆರೋಪವೂ ಕೇಳಿಬಂದಿದೆ. ತಮ್ಮ ಸ್ವಾರ್ಥಕ್ಕಾಗಿ ಅತಿಕ್ರಮಣಕಾರರಿಗೆ ಬೆಂಬಲ ನೀಡಿರುವ ಭ್ರಷ್ಟ ಹಾಗೂ ವಂಚಕ ಅಧಿಕಾರಿಗಳು ಮತ್ತು ನೌಕರರ ವಿರುದ್ಧವೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮಿಡ್‌ನೈಟ್ ಸಿಎಂ ಡಿಕೆಶಿ-ರಾಮಲಿಂಗಾ ರೆಡ್ಡಿ ರಹಸ್ಯ ಮೀಟಿಂಗ್ – ಸಂಧಾನವೋ? ರಾಜೀನಾಮೆ ಮುಂದುವರಿಕೆಯೋ?



















