ಬೆಂಗಳೂರು : ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿನ್ನೆ ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನರಕಸದೃಶ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಪೊಲೀಸರ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಸಾಮಾನ್ಯ ಸಾರ್ವಜನಿಕರ ಹಾಗೂ ರೋಗಿಗಳ ಅನುಕೂಲ ಮತ್ತು ಜೀವವು ವಿಐಪಿಗಳ ಸೌಕರ್ಯದಷ್ಟೇ ಮುಖ್ಯವಾಗುವುದು ಯಾವಾಗ?” ಎಂದು ಸಾರ್ವಕನಿಕರು ಕಟುವಾಗಿ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು ತಡೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ : ದೇಶದ ಜನತೆಗೆ ಶಾಕ್ – ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ.. ಬೆಂಗಳೂರಲ್ಲಿ ಎಷ್ಟಾಗಿದೆ ರೇಟ್?



















