ಬೆಂಗಳೂರು: ರೈಲು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರೈಲು ನಿಲ್ದಾಣಗಳಲ್ಲಿರುವ ಮಳಿಗೆಗಳಲ್ಲಿ ತಿಂಡಿ-ತಿನಿಸುಗಳ ಬೆಲೆಯನ್ನು ಈಗ ಏರಿಕೆ ಮಾಡಲಾಗಿದೆ. ರೈಲು ನಿಲ್ದಾಣಗಳ ಮಳಿಗೆಗಳಲ್ಲಿ ಲಭಿಸುವ ಇಡ್ಲಿ, ವಡಾ, ಸಮೋಸ ಸೇರಿ ಹಲವು ತಿನಿಸುಗಳ ಬೆಲೆಯಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಕೇಂದ್ರೀಯ ರೈಲ್ವೆ ವಲಯವು ಈಗಾಗಲೇ ದರ ಪಟ್ಟಿಯನ್ನು ಕೂಡ ಪ್ರಕಟಿಸಿದೆ. ಜೂನ್ 1ರಿಂದ ಹೊಸ ದರಗಳು ಪ್ರಯಾಣಿಕರಿಗೆ ಅನ್ವಯವಾಗಲಿವೆ.
ವಡಾ ಪಾವ್ ಬೆಲೆಯು ಇದುವರೆಗೆ 13 ರೂಪಾಯಿ ಇತ್ತು. ಇದನ್ನು ಈಗ 20 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದೇ ರೀತಿ, ಸಮೋಸಾ ಬೆಲೆಯನ್ನು 12 ರೂಪಾಯಿಯಿಂದ 20 ರೂಪಾಯಿಗೆ ಏರಿಕೆ ಮಾಡಲಾಗಿದೆ. ಎರಡು ಪಾವ್ ಬಾಜಿಗೆ 50 ರೂಪಾಯಿ, ಎರಡು ವಡೆಗೆ 35 ರೂಪಾಯಿ, ಈರುಳ್ಳಿ ದೋಸೆಗೆ 30 ರೂಪಾಯಿ, ರವೆ ದೋಸೆಗೆ 35 ರೂಪಾಯಿ, 2 ಇಡ್ಲಿಗಳಿಗೆ 30 ರೂಪಾಯಿ ಸೇರಿ ಹಲವು ಬಗೆಯ ತಿನಿಸುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಮಿಲ್ಕ್ ಶೇಕ್, ಚನಾ, ಕಡಲೆಬೀಜ, ಚಿಕ್ಕಿಗಳ ಬೆಲೆಯನ್ನು ಕೂಡ ಏರಿಕೆ ಮಾಡಲಾಗಿದೆ. ಪ್ರತಿ ದಿನ ಲಕ್ಷಾಂತರ ಜನ ರೈಲು ನಿಲ್ದಾಣಗಳ ಮೂಲಕ ಪ್ರಯಾಣ ಆರಂಭಿಸುತ್ತಾರೆ. ಆಗ ಜನ ನಿಲ್ದಾಣಗಳಲ್ಲಿರುವ ಮಳಿಗೆಗಳಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸುತ್ತಾರೆ. ಆದರೆ, ಈಗ ದಿಢೀರನೆ ಬೆಲೆಯೇರಿಕೆ ಮಾಡಿರುವುದು ಲಕ್ಷಾಂತರ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಸೆಂಟ್ರಲ್ ರೈಲ್ವೆ ವಲಯ ಮಾತ್ರ ತಿಂಡಿ ತಿನಿಸುಗಳ ಬೆಲೆಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ವಲಯಕ್ಕೆ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಹಲವು ರೈಲ್ವೆ ನಿಲ್ದಾಣಗಳು ಬರುತ್ತವೆ. ವಿಶೇಷವಾಗಿ, ಮುಂಬೈ, ಪುಣೆ, ನಾಗ್ಪುರ, ಸೋಲಾಪುರ, ಭುಸವಾಲ್, ನಾಶಿಕ್ ಸೇರಿ ಹಲವು ನಿಲ್ದಾಣಗಳಲ್ಲಿ ಮಾತ್ರ ಇನ್ನುಮುಂದೆ ತಿಂಡಿ-ತಿನಿಸುಗಳ ಬೆಲೆಯು ಏರಿಕೆಯಾಗಲಿದೆ. ಇದರಿಂದಾಗಿ ಪ್ರಯಾಣಿಕರ ಜೇಬಿಗೆ ಹೊರೆಯಾಗಲಿದೆ.


















