ಧರ್ಮಶಾಲಾ : ಇಲ್ಲಿ ನಡೆದ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕಿದ್ದು, ಪ್ಲೇ-ಆಫ್ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಆಟಗಾರರ ಸಂಘಟಿತ ಪ್ರದರ್ಶನ ಹಾಗೂ ನಾಯಕನ ಜವಾಬ್ದಾರಿಯುತ ಆಟವು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ.
ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತರೂ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಯಾವುದೇ ರೀತಿಯ ನಿರಾಸೆ ವ್ಯಕ್ತಪಡಿಸಲಿಲ್ಲ. ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಿದ್ದನ್ನು ಅರಿತಿದ್ದ ಅವರು, ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಪೇರಿಸುವ ಮೂಲಕ ಎದುರಾಳಿ ತಂಡದ ಮೇಲೆ ಆರಂಭಿಕ ಒತ್ತಡ ಹೇರುವ ತಂತ್ರ ರೂಪಿಸಿದ್ದರು.
ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಂಡಕ್ಕೆ ಅಗತ್ಯವಿದ್ದ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಇವರಿಬ್ಬರ ನಿರ್ಗಮನದ ಬಳಿಕ ಕ್ರೀಸ್‌ಗೆ ಇಳಿದ ನಾಯಕ ರಜತ್ ಪಾಟೀದಾರ್ ಹಾಗೂ ಕೃಣಾಲ್ ಪಾಂಡ್ಯ ನಾಲ್ಕನೇ ವಿಕೆಟ್‌ಗೆ ಅತ್ಯಮೂಲ್ಯ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದರು.
ಕೇವಲ 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟಿದಾರ್
ಆರಂಭದಲ್ಲಿ ಕೊಂಚ ಜವಾಬ್ದಾರಿಯುತ ಹಾಗೂ ಸಂಯಮದ ಆಟವಾಡಿದ ರಜತ್ ಪಾಟಿದಾರ್, ಕುಲ್ವಂತ್ ಖೆಜ್ರೋಲಿಯಾ ಅವರ ಎರಡನೇ ಓವರ್‌ನಿಂದ ತಮ್ಮ ನೈಜ ಸ್ಫೋಟಕ ಆಟವನ್ನು ಶುರು ಮಾಡಿದರು. ಕೇವಲ 3 ಎಸೆತಗಳಲ್ಲಿ 14 ರನ್ ಚಚ್ಚುವ ಮೂಲಕ ರನ್ ಮಳೆಗೆ ಮುನ್ನುಡಿ ಬರೆದರು. ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬೌಲರ್‌ಗಳಾದ ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಅನ್ನು ಧೂಳೀಪಟ ಮಾಡಿದ ಪಾಟಿದಾರ್, ತಾವು ಎದುರಿಸಿದ ಕೊನೆಯ 19 ಎಸೆತಗಳಲ್ಲಿ ಬರೋಬ್ಬರಿ 71 ರನ್ ಸಿಡಿಸಿದರು. ಅಂತಿಮವಾಗಿ ಕೇವಲ 33 ಎಸೆತಗಳಲ್ಲಿ 93 ರನ್ ಗಳಿಸುವ ಮೂಲಕ ಗುಜರಾತ್ ಪಾಳಯದಲ್ಲಿ ನಡುಕ ಹುಟ್ಟಿಸಿದರು.
ಹಳೆಯ ದಾಖಲೆಗಳನ್ನು ಅಳಿಸಿಹಾಕಿದ ಆರ್‌ಸಿಬಿ ಹಾಗೂ ನಾಯಕ
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಇದು ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲಿಯೇ ಯಾವುದೇ ತಂಡ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ 2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 233 ರನ್ ಗಳಿಸಿದ್ದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಇದೀಗ ಆರ್‌ಸಿಬಿ ಆ ದಾಖಲೆಯನ್ನು ಅಳಿಸಿಹಾಕಿ ಹೊಸ ಇತಿಹಾಸ ಬರೆದಿದೆ. ಇನ್ನು ವೈಯಕ್ತಿಕವಾಗಿ ಅದ್ಭುತ ಸಾಧನೆ ಮಾಡಿದ ರಜತ್ ಪಾಟೀದಾರ್, ಪ್ಲೇ-ಆಫ್ ಪಂದ್ಯವೊಂದರಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಅವರ ಒಂದು ದಶಕದ ಹಳೆಯ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : RCB ವಿರುದ್ಧದ ಪಂದ್ಯದಲ್ಲಿ ವಿಚಿತ್ರ ರೀತಿಯಲ್ಲಿ ಔಟ್ ಆದ ಸಾಯಿ ಸುದರ್ಶನ್.. ವಿಡಿಯೋ ನೋಡಿ!



















