ಬೆಂಗಳೂರು : ಯಲಹಂಕದ ಎಂ.ಎಸ್ ಪಾಳ್ಯ ಸಮೀಪದ ಅವೇಕ್ಷಾ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ಸುಮಾರು 2.30ರ ವೇಳೆಗೆ ಆಸ್ಪತ್ರೆಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ಇಡೀ ಆಸ್ಪತ್ರೆಗೆ ವ್ಯಾಪಿಸಿಕೊಂಡಿದೆ.
ಈ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡವನ್ನೇ ಆವರಿಸಿಕೊಂಡಿದೆ.
ಅಗ್ನಿ ಅವಘಡ ಸಂಭವಿಸಿದ ವೇಳೆ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ರೋಗಿಗಳಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಲ ಒಳರೋಗಿಗಳು ಆತಂಕದಿಂದ ಆಸ್ಪತ್ರೆಗೆ ಹೊರಗೆ ಓಡಿ ಬಂದಿದ್ದಾರೆ. ಉಳಿದ ರೋಗಿಗಳನ್ನು ಸಿಬ್ಬಂದಿ ಹಾಗೂ ರಕ್ಷಣಾ ತಂಡ ಸುರಕ್ಷಿತವಾಗಿ ಹೊರ ಕರೆದುಕೊಂಡು ಬಂದು ಹತ್ತಿರದ ಬೇರೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಸ್ಥಳಾಂತರಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ. ಹಲವು ವಾಹನಗಳೊಂದಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದೊಳಗೆ ಹರಡಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ವರುಣಾರ್ಭಟಕ್ಕೆ ಧರೆಗುರುಳಿದ ಬೃಹತ್ ಮರಗಳು.. ಜನಜೀವನ ತತ್ತರ!


















