ಹುಬ್ಬಳ್ಳಿ : ಕಾರ್ ಸೈಡ್ ಕೊಡುವ ವಿಚಾರಕ್ಕೆ ನಡುರಸ್ತೆಯಲ್ಲೇ ಪುಂಡರು ರೌಡಿಸಂ ಮಾಡಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ನಡೆದಿದೆ. ಯುವಕನ ಮೇಲೆ ಮೂವರು ಕಿರಾತಕರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಕಾರು ಮೈಮೇಲೆ ತಂದಿದ್ದಾನೆ ಎಂದು ಆರೋಪಿಸಿ ಸೈಯದ್ ಬಿಜಾಪುರ ಎಂಬ ಯುವಕನೊಂದಿಗೆ ಜಗಳ ಆರಂಭಗೊಂಡಿದ್ದು, ಬಳಿಕ ರಿಯಾಝ್, ರಾಜು ಮತ್ತು ಮಂಜು ಎಂಬವರು ಸೇರಿ ಸೈಯದ್ ಮೇಲೆ ರಸ್ತೆ ಮಧ್ಯೆಯೇ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಸೈಯದ್ ಬಿಜಾಪುರ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವಿದ್ಯಾನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಎರಡು ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : 2 ಗುಂಪುಗಳ ನಡುವೆ ಫೈಟ್ – ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ!


















