ಧಾರವಾಡ : ಜಮೀನು ವ್ಯಾಜ್ಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹುಬ್ಬಳ್ಳಿಯ ಉದ್ಯಮಿ ಫೆಲೋಮಿನಾ ಅಂಗರಕ್ಷಕನೋರ್ವ ಯುವಕನ ಕಾಲಿಗೆ ಫೈರಿಂಗ್ ಮಾಡಿರುವಂತಹ ಘಟನೆ ಧಾರವಾಡ ಹೊರವಲಯದ ತ್ರಿಬಲ್ ಐಟಿ ಬಳಿ ನಡೆದಿದೆ.
ಅಂಗರಕ್ಷಕರಿಂದ 8 ಸುತ್ತು ಫೈರಿಂಗ್ ಮಾಡಲಾಗಿದ್ದು, 24 ವರ್ಷದ ವಿಠ್ಠಲ್ ವಾಲೀಕಾರ್ ಕಾಲಿಗೆ ಗುಂಡು ತಗುಲಿದೆ. ಸದ್ಯ ಗಾಯಾಳು ವಿಠ್ಠಲ್ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂರು ಎಕರೆ ಜಮೀನಿನ ವಿಚಾರವಾಗಿ ಹಲವು ದಿನಗಳಿಂದ ವ್ಯಾಜ್ಯ ನಡೆಯುತ್ತಿದ್ದು, ವಸತಿ ನಿವೇಶನ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಜಮೀನಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. “ಜಮೀನಿನ ಅಳತೆ ಸರಿಯಾಗಿ ಮಾಡಿ ಅಭಿವೃದ್ಧಿ ಕಾರ್ಯ ನಡೆಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದರು.
ಇದೇ ವೇಳೆ “ಈ ಜಮೀನಿನ ವಿಚಾರದಲ್ಲಿ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ” ಎಂದು ಫಿಲೋಮಿನಾ ಪರ ವಾದ ಮಂಡಿಸಲಾಗಿದ್ದು, ಈ ವಿಷಯವಾಗಿ ಎರಡೂ ಬಣದವರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ತಾರಕ್ಕೇರಿದ ವೇಳೆ ಫಿಲೋಮಿನಾ ಅವರ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ.
ಈ ವೇಳೆ ಕೃಷಿ ಕೆಲಸ ಮಾಡುತ್ತಿದ್ದ ವಿಠ್ಠಲ್ ವಾಲೀಕಾರ್ ಗುಂಡೇಟಿಗೆ ಗಾಯಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಧಾವಿಸಿದ ವಿದ್ಯಾಗಿರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೀದರ್ ಪಶು ವೈದ್ಯಕೀಯ ವಿವಿಯಲ್ಲಿ 45 ಕೋಟಿ ಹಗರಣ : ವಿಶ್ರಾಂತ ಕುಲಪತಿ ಸೇರಿ 6 ಮಂದಿ ಬಂಧನ!


















