ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ, ಕೇವಲ 15 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ದಿಟ್ಟ ಗುರಿಗಳಿಂದ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಬಹುತೇಕ ಯುವ ಆಟಗಾರರು ಅರ್ಧಶತಕ ಅಥವಾ ಶತಕ ಬಾರಿಸುವ ಕನಸು ಕಂಡರೆ, ವೈಭವ್ ಮಾತ್ರ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಯಾರೂ ಮಾಡದ ಸಾಧನೆ ಮಾಡುವತ್ತ ಕಣ್ಣಿಟ್ಟಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಮೊಟ್ಟಮೊದಲ ದ್ವಿಶತಕ (200 ರನ್) ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಮಹದಾಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ವೈಭವ್, ತಮ್ಮ ಈ ನಿರ್ಭೀತ ಮನಸ್ಥಿತಿಯನ್ನು ತೆರೆದಿಟ್ಟರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಹೊಂದಿರುವ ಅಪಾರ ಆತ್ಮವಿಶ್ವಾಸ ಇದೀಗ ಭಾರತೀಯ ಕ್ರಿಕೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯ ಮೈಲುಗಲ್ಲುಗಳ ಬಗ್ಗೆ ಆಸಕ್ತಿ ಇಲ್ಲ!
ಸಂವಾದದ ವೇಳೆ ಕೆವಿನ್ ಪೀಟರ್ಸನ್ ಅವರು, “ಅರ್ಧಶತಕ ಬಾರಿಸಿದಾಗ ಅದನ್ನು ಸಂಭ್ರಮಿಸಲು ನಿಮಗೆ ಇಷ್ಟವಾಗುತ್ತದೆಯೇ?” ಎಂದು ಕೇಳಿದ ಪ್ರಶ್ನೆಗೆ ವೈಭವ್ ಅತ್ಯಂತ ನೇರವಾಗಿ ಉತ್ತರಿಸಿದರು. “ಇಲ್ಲ, ನನಗೆ ಅದರ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ,” ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ಮೈಲುಗಲ್ಲುಗಳು ತಮಗೆ ಸಮಾಧಾನ ತರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ವೈಭವ್, ತಮ್ಮ ದೊಡ್ಡ ಗುರಿಯನ್ನು ಬಿಚ್ಚಿಟ್ಟರು.
“ನನಗೆ ಟಿ20 ಮಾದರಿಯಲ್ಲಿ 200 ರನ್ ಗಳಿಸಬೇಕು ಎಂಬ ಆಸೆಯಿದೆ. ಕ್ರಿಸ್ ಗೇಲ್ ಅವರ ಆ ದಾಖಲೆಯನ್ನು ನಾನು ಮುರಿಯಬೇಕು,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2013ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಕ್ರಿಸ್ ಗೇಲ್ ಅಜೇಯ 175 ರನ್ ಸಿಡಿಸಿದ್ದು, ಇದುವರೆಗೂ ಟಿ20 ಕ್ರಿಕೆಟ್‌ನ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿದಿದೆ. ಒಂದು ದಶಕ ಕಳೆದರೂ ಯಾವುದೇ ಬ್ಯಾಟರ್ ವೃತ್ತಿಪರ ಟಿ20 ಕ್ರಿಕೆಟ್‌ನಲ್ಲಿ 200ರ ಗಡಿ ಮುಟ್ಟಲು ಸಾಧ್ಯವಾಗಿಲ್ಲ.
ನಿರ್ಭೀತ ಆಟ ಹಾಗೂ ಆತ್ಮವಿಶ್ವಾಸ
ದ್ವಿಶತಕದ ಕನಸಿಗೆ ಶತಕ ಕೇವಲ ಅರ್ಧ ದಾರಿ ಮಾತ್ರ ಎಂದು ಪೀಟರ್ಸನ್ ನೆನಪಿಸಿದಾಗಲೂ ವೈಭವ್ ಕಿಂಚಿತ್ತೂ ವಿಚಲಿತರಾಗಲಿಲ್ಲ. “ಒಂದು ವೇಳೆ ನಾನು ಯಾವುದೇ ಪಂದ್ಯದಲ್ಲಿ ಪೂರ್ಣ 20 ಓವರ್‌ಗಳನ್ನು ಆಡಿದರೆ, ಖಂಡಿತವಾಗಿಯೂ ಆ 175 ರನ್‌ಗಳ ದಾಖಲೆಯನ್ನು ಮುರಿಯಬಲ್ಲೆ,” ಎಂದು ಅವರು ಅತ್ಯಂತ ಆತ್ಮವಿಶ್ವಾಸದಿಂದ ನುಡಿದರು.
ವೈಭವ್ ಅವರ ಈ ವಿಶ್ವಾಸದ ಹಿಂದಿರುವುದು ಅವರ ನಿರ್ಭೀತ ಬ್ಯಾಟಿಂಗ್ ಶೈಲಿ. ತಾವು ಯಾವುದೇ ಮೈಲುಗಲ್ಲಿನ ಸನಿಹದಲ್ಲಿದ್ದರೂ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. “ತೊಂಬತ್ತರ ಗಡಿಯಲ್ಲಿರುವಾಗಲೂ ನನಗೆ ಯಾವುದೇ ಒತ್ತಡವಿರುವುದಿಲ್ಲ. ಆ ಸಮಯದಲ್ಲಿಯೂ ನಾನು ನನ್ನ ಸಹಜ ಆಟವನ್ನೇ ಮುಂದುವರಿಸುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಮೈಲುಗಲ್ಲುಗಳಿಗಾಗಿ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳದೆ, ಕ್ರೀಸ್‌ನಲ್ಲಿ ನಿಂತು ರನ್ ಕಲೆಹಾಕುವುದಷ್ಟೇ ಅವರ ಮೂಲ ಮಂತ್ರವಾಗಿದೆ.
ಅಂಕಿ-ಅಂಶಗಳೇ ಸಾಕ್ಷಿ
ವೈಭವ್ ಆಡಿರುವ ಮಾತುಗಳು ಕೇವಲ ಬಡಾಯಿಯಲ್ಲ; ಅವರ ಈವರೆಗಿನ ಅಂಕಿ-ಅಂಶಗಳೇ ಅವರ ಸಾಮರ್ಥ್ಯಕ್ಕೆ ಕನ್ನಡಿಯಾಗಿವೆ. 19 ವಯೋಮಿತಿಯ ವಿಶ್ವಕಪ್ ಫೈನಲ್‌ನಲ್ಲಿ ಅವರು 175 ರನ್ ಸಿಡಿಸಿ, ಫೈನಲ್ ಪಂದ್ಯವೊಂದರ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದರು. ಹಾಗೆಯೇ 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಆಡಿದ್ದ ಅವರು 190 ರನ್ ಚಚ್ಚಿ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕದ ಅಂಚಿನಲ್ಲಿ ಎಡವಿದ್ದರು.
ಇದಕ್ಕಿಂತಲೂ ಆಶ್ಚರ್ಯಕರ ವಿಚಾರವೆಂದರೆ, ತಮ್ಮ ವೃತ್ತಿಜೀವನದ ಅತಿ ದೀರ್ಘ ಇನ್ನಿಂಗ್ಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ನೀಡಿದ ಉತ್ತರ. “ನಾನು ನನ್ನ ರಾಜ್ಯದ ಪರ ಸ್ಥಳೀಯ ಪಂದ್ಯವೊಂದರಲ್ಲಿ ಸಂಪೂರ್ಣ 50 ಓವರ್‌ಗಳ ಕಾಲ ಬ್ಯಾಟ್ ಬೀಸಿ ಅಜೇಯ 335 ರನ್ ಗಳಿಸಿದ್ದೆ,” ಎಂದು ಅವರು ಬಹಿರಂಗಪಡಿಸಿದ್ದಾರೆ. ಕೇವಲ 15 ವರ್ಷದ ಹುಡುಗನೊಬ್ಬ ಇಷ್ಟು ದೀರ್ಘ ಕಾಲ ಕ್ರೀಸ್‌ನಲ್ಲಿ ನಿಂತು ಬೃಹತ್ ಮೊತ್ತ ಕಲೆಹಾಕಿರುವುದು ಅವರ ಅದ್ಭುತ ತ್ರಾಣ ಮತ್ತು ರನ್ ದಾಹವನ್ನು ಎತ್ತಿ ತೋರಿಸುತ್ತದೆ.
ಟಿ20 ಕ್ರಿಕೆಟ್‌ನಲ್ಲಿ 200 ರನ್ ಗಳಿಸುವುದು ಇನ್ನೂ ಸಾಧಿಸಲಾಗದ ಮೈಲುಗಲ್ಲಾಗಿಯೇ ಉಳಿದಿದೆ. ಒಬ್ಬ ಹದಿಹರೆಯದ ಆಟಗಾರನ ಈ ಮಟ್ಟದ ಗುರಿ ಅಸಾಧ್ಯವೆಂದು ಮೇಲ್ನೋಟಕ್ಕೆ ಅನ್ನಿಸಿದರೂ, ಅಸಾಧ್ಯವಾದದ್ದನ್ನು ಸಾಧಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ವೈಭವ್ ಸೂರ್ಯವಂಶಿ ಅವರ ಅದಮ್ಯ ವಿಶ್ವಾಸ ಮಾತ್ರ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸುತ್ತಿದೆ.
ಇದನ್ನೂ ಓದಿ : ಐಸಿಸಿ ಟೂರ್ನಿಗಳಿಗೆ ವಿದಾಯ ಹೇಳಲು ಸಜ್ಜಾದ ಆಸ್ಟ್ರೇಲಿಯಾದ ವೇಗಿ!



















