ಬೆಂಗಳೂರು : ನಗರದ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 8ನೇ ಮೈಲಿಯಲ್ಲಿ ನಿನ್ನೆ ಸಂಜೆ ರಸ್ತೆ ಮಧ್ಯೆಯೇ ಭಾರೀ ಹೈಡ್ರಾಮಾ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಯುವತಿ ಕಾರ್‌ಗೆ ಟಚ್ ಮಾಡಿದ ವಿಚಾರಕ್ಕೆ ಕಾರ್ ಚಾಲಕನೊಂದಿಗೆ ತೀವ್ರ ವಾಗ್ವಾದ ನಡೆಸಿ, ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾಳೆ.
KA-06-HP-1149 ಸಂಖ್ಯೆಯ ಬೈಕ್‌ನಲ್ಲಿ ಬಂದಿದ್ದ ಯುವತಿ ಎಡಭಾಗಕ್ಕೆ ಟರ್ನ್ ಮಾಡುವ ವೇಳೆ ಇಂಡಿಕೇಟರ್ ಹಾಕದೆ ಏಕಾಏಕಿ ತಿರುಗಿದ್ದಾಳೆ ಎನ್ನಲಾಗಿದೆ. ಈ ವೇಳೆ ಬೈಕ್ ಕಾರ್‌ಗೆ ಟಚ್ ಆಗಿದ್ದು, ಕಾರ್ ಚಾಲಕ ಪ್ರಶ್ನೆ ಮಾಡಿದಾಗ ಯುವತಿ ಕೋಪಗೊಂಡು ರಸ್ತೆಯಲ್ಲೇ ರಂಪಾಟ ಮಾಡಿದ್ದಾಳೆ.
ಕಾರ್ ಚಾಲಕ “ಇಂಡಿಕೇಟರ್ ಹಾಕದೇ ಯಾಕೆ ಟರ್ನ್ ಮಾಡಿದ್ರಿ” ಎಂದು ಕೇಳಿದ್ದಕ್ಕೆ ಯುವತಿ ಅಶ್ಲೀಲ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾಳೆ. ನಡು ರಸ್ತೆಯಲ್ಲೇ ಕೆಟ್ಟ ಪದಗಳನ್ನು ಬಳಸಿ ಕೂಗಾಡಿದ್ದರಿಂದ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಘಟನೆ ವೇಳೆ ಯುವತಿ ಹೆಲ್ಮೆಟ್ ಕೂಡ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದರ ಜೊತೆಗೆ ಸಾರ್ವಜನಿಕ ಸ್ಥಳದಲ್ಲೇ ಅಸಭ್ಯವಾಗಿ ವರ್ತಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಾಲಹಳ್ಳಿ ಪೊಲೀಸರು ಘಟನೆ ಕುರಿತು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು!



















