ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಜಿಂಕೆಯನ್ನು ನುಂಗಿದ್ದ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ನೆಟ್ಕಲ್ ಗ್ರಾಮದ ಬಳಿಯ ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಪೈಪ್‌ಲೈನ್ ಸಮೀಪ ಹೆಬ್ಬಾವು ನರಳಾಡುತ್ತಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ.
ಜಿಂಕೆಯನ್ನು ನುಂಗಿದ್ದ ಪರಿಣಾಮ ಮುಂದೆ ಸಾಗಲಾರದೆ ಹೆಬ್ಬಾವು ಪೈಪ್‌ಲೈನ್ ಬಳಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಸುಮಾರು 10 ಅಡಿ ಉದ್ದ ಹಾಗೂ 30 ಕೆಜಿಗೂ ಹೆಚ್ಚು ತೂಕವಿದ್ದ ಹೆಬ್ಬಾವು ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದು, ಅದರ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಉರಗ ತಜ್ಞರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಬಳಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಹೆಬ್ಬಾವನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ರವಾನಿಸಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ಭಾರೀ ಗಾತ್ರದ ಹೆಬ್ಬಾವನ್ನು ಕಂಡು ಸ್ಥಳೀಯರು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಇದನ್ನೂ ಓದಿ : ಒಡಹುಟ್ಟಿದ ಅಕ್ಕಳನ್ನೇ ಕೊಚ್ಚಿ ಕೊಲೆಗೈದ ಕಿರಾತಕ ತಮ್ಮ.. ಬೆಚ್ಚಿಬಿದ್ದ ಹಾವೇರಿ ಜನ!


















