ಉತ್ತರ ಕನ್ನಡ : ಜಿಲ್ಲೆಯ ಪ್ರಮುಖ ನಗರವಾದ ಶಿರಸಿಯಲ್ಲಿ ಬೈಕ್ ಅಪಘಾತದ ವಿಚಾರವಾಗಿ ಎರಡು ಯುವಕರ ಗುಂಪುಗಳ ನಡುವೆ ಭೀಕರ ಗ್ಯಾಂಗ್‌ವಾರ್ ನಡೆದಿದ್ದು, ಸಿಂಪಿಗಲ್ಲಿಯ ನಡುರಸ್ತೆಯಲ್ಲೇ ಯುವಕರ ಗುಂಪುಗಳು ಪರಸ್ಪರ ಅಟ್ಟಾಡಿಸಿಕೊಂಡು ಹೊಡೆದಾಡಿಕೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮೂಲಗಳ ಪ್ರಕಾರ, ಮೇ 21ರ ರಾತ್ರಿ ಶಿರಸಿಯ ದೇವಿಕೆರೆ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಣ್ಣ ಅಪಘಾತ ಸಂಭವಿಸಿತ್ತು. ಈ ಘಟನೆ ಬಳಿಕ ಎರಡು ಗುಂಪಿನ ಯುವಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.
ಅದೇ ಹಳೆಯ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಯುವಕರು ಬಳಿಕ ಸಿಂಪಿಗಲ್ಲಿಯಲ್ಲಿ ಮುಖಾಮುಖಿಯಾಗಿದ್ದು, ಏಕಾಏಕಿ ನಡುರಸ್ತೆಯಲ್ಲೇ ಗಲಾಟೆ ಆರಂಭವಾಗಿದೆ. ಯುವಕರು ಪರಸ್ಪರ ಹೊಡೆದಾಡಿಕೊಂಡದ್ದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಸಿಕೊಂಡು ಕಾರ್ಯಾಚರಣೆ ನಡೆಸಿದ ಶಿರಸಿ ಟೌನ್ ಪೊಲೀಸ್ ಠಾಣೆ ಪೊಲೀಸರು, ಗಲಾಟೆಯಲ್ಲಿ ಭಾಗಿಯಾಗಿದ್ದ ಅಯಾನ್ ಟಿನಮೇಕರ್, ಸರ್ಫರಾಜ್ ಟಿನಮೇಕರ್, ಆದಿಲ್ ಸಕ್ಕರಖಾನ್, ಅಭಯ್ ಹುದಾರ್, ಸರ್ವೇಶ ಹಿರೇಮಠ ಮತ್ತು ಆಕಾಶ್ ಕುಂದನಗಾರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ ಪುಂಡರು – ವಿಡಿಯೋ ವೈರಲ್!



















