ನವದೆಹಲಿ : ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಭಾರೀ ಸಂಚಲನ ಮೂಡಿಸಿರುವ ವಿಡಂಬನಾತ್ಮಕ ಪೇಜ್ “ಕಾಕ್ರೋಚ್ ಜನತಾ ಪಾರ್ಟಿ” (Cockroach Janata Party) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ವಿಪಕ್ಷದ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದು, ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ಫ್ಯಾಸಿಸಂ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ನಿರ್ಬಂಧ
ಗುಪ್ತಚರ ಇಲಾಖೆಯ (IB) ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ. ಈ ಸಾಮಾಜಿಕ ಮಾಧ್ಯಮ ಖಾತೆಯು “ರಾಷ್ಟ್ರೀಯ ಭದ್ರತೆಗೆ ಧಕ್ಕೆ” ತರುತ್ತಿದೆ ಎಂದು ಇಂಟೆಲಿಜೆನ್ಸ್ ಬ್ಯೂರೋ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ತಂತ್ರಜ್ಞಾನ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಎಕ್ಸ್ ಸಂಸ್ಥೆಗೆ ಈ ಖಾತೆಯನ್ನು ಭಾರತದಲ್ಲಿ ತಡೆಹಿಡಿಯುವಂತೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಈ ಪೇಜ್ ಭಾರತೀಯ ಬಳಕೆದಾರರಿಗೆ ಕಾಣಿಸದಂತೆ ಬ್ಲಾಕ್ ಮಾಡಲಾಗಿದೆ.
ಕೇಂದ್ರ ಸರ್ಕಾರ ಯುವಜನತೆಗೆ ಹೆದರಿದೆ: ಮಹುವಾ ವಾಗ್ದಾಳಿ
ಕೇಂದ್ರದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿರುವ ಸಂಸದೆ ಮಹುವಾ ಮೊಯಿತ್ರಾ, “ಇದು ಪ್ರಜಾಪ್ರಭುತ್ವವಲ್ಲ, ಫ್ಯಾಸಿಸಂ. ನಮ್ಮ ಸರ್ಕಾರ ಈ ದೇಶದ ಯುವ ಪೀಳಿಗೆಗೆ ಎಷ್ಟರಮಟ್ಟಿಗೆ ಹೆದರಿದೆ ಎಂದರೆ, ಅದಕ್ಕೆ ಆನ್‌ಲೈನ್‌ನಲ್ಲಿ ನಡೆಯುವ ಒಂದು ಸಣ್ಣ ಡಿಜಿಟಲ್ ಚಳವಳಿಯನ್ನೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಪ್ರತಿ ದಿನ ವಿರೋಧ ಪಕ್ಷದಲ್ಲಿ ನಿಂತು ಎಂತಹ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು,” ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಆಮ್ ಆದ್ಮಿ ಪಾರ್ಟಿ (ಆಪ್) ಮುಖಂಡ ಮನೀಶ್ ಸಿಸೋಡಿಯಾ ಕೂಡ ಈ ಪೇಜ್‌ಗೆ ಬೆಂಬಲ ಸೂಚಿಸಿದ್ದು, “ಇದು ಮೊಸಳೆಗಳು ಮತ್ತು ಜಿರಳೆಗಳ ನಡುವಿನ ಯುದ್ಧವಾಗಿದ್ದು, ನಾನು ಹೆಮ್ಮೆಯಿಂದ ಕಾಕ್ರೋಚ್ ಜನತಾ ಪಾರ್ಟಿಯ ಪರವಾಗಿ ನಿಲ್ಲುತ್ತೇನೆ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’ ವಿವಾದ?
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇತ್ತೀಚೆಗೆ ಕೋರ್ಟ್ ಕಲಾಪವೊಂದರ ವೇಳೆ ಹಿರಿಯ ಹುದ್ದೆ ಬಯಸಿ ಬಂದಿದ್ದ ವಕೀಲರೊಬ್ಬರನ್ನು ಟೀಕಿಸುವಾಗ ನಿರುದ್ಯೋಗಿ ಯುವಕರನ್ನು ‘ಪರಾವಲಂಬಿಗಳು’ ಮತ್ತು ‘ಜಿರಳೆಗಳು’ (Cockroaches) ಎಂಬ ಪದಗಳನ್ನು ಬಳಸಿ ಟೀಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿಜೆಐ ಅವರ ಈ ಹೇಳಿಕೆಯ ಬೆನ್ನಲ್ಲೇ ಮೇ 16ರಂದು ಅಭಿಜಿತ್ ದೀಪ್ಕೆ ಎಂಬವರು ಈ ಕುರಿತು ವಿಡಂಬನಾತ್ಮಕ ಪೇಜ್ ವೊಂದನ್ನು ತೆರೆದಿದ್ದರು. ಆದರೆ ನಂತರ ಸ್ಪಷ್ಟನೆ ನೀಡಿದ್ದ ಮುಖ್ಯ ನ್ಯಾಯಮೂರ್ತಿಗಳು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನಕಲಿ ಪದವಿ ಪಡೆದು ವಕೀಲ ವೃತ್ತಿಗೆ ಬರುವವರನ್ನು ಮಾತ್ರ ತಾವು ಉಲ್ಲೇಖಿಸಿದ್ದು ಎಂದು ಹೇಳಿದ್ದರು. ಆದರೆ ಅಷ್ಟರಲ್ಲಾಗಲೇ ಈ ಆನ್‌ಲೈನ್ ಅಭಿಯಾನವು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ನಿರ್ಬಂಧದ ಹೊರತಾಗಿಯೂ ಇಂಟರ್ನೆಟ್‌ನಲ್ಲಿ ಭಾರಿ ಕ್ರೇಜ್
ಭಾರತದಲ್ಲಿ ಎಕ್ಸ್ ಖಾತೆಯನ್ನು ನಿರ್ಬಂಧಿಸುವ ಮುನ್ನವೇ ಈ ಪೇಜ್ ಕೇವಲ ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದುಕೊಂಡಿತ್ತು. ವಿಶೇಷವೆಂದರೆ, ಎಕ್ಸ್ ಖಾತೆ ತಡೆಹಿಡಿದ ತಕ್ಷಣವೇ “ಕಾಕ್ರೋಚ್ ಈಸ್ ಬ್ಯಾಕ್” (Cockroach Is Back) ಹೆಸರಿನಲ್ಲಿ ಮತ್ತೊಂದು ಹೊಸ ಖಾತೆ ಸೃಷ್ಟಿಯಾಗಿದ್ದು, ಕೇವಲ ಒಂದು ಗಂಟೆಯಲ್ಲಿ 17,000 ಜನ ಅದನ್ನು ಫಾಲೋ ಮಾಡಿದ್ದಾರೆ. ಇನ್ನು ಇದರ ಇನ್‌ಸ್ಟಾಗ್ರಾಮ್ ಪೇಜ್ ಭಾರತದಲ್ಲಿ ಇನ್ನೂ ಸಕ್ರಿಯವಾಗಿದ್ದು, ಬರೋಬ್ಬರಿ 1.8 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ (88 ಲಕ್ಷ) ಸಂಖ್ಯೆಯನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಗುಂಡು ಹಾರಿಸಿಕೊಂಡು ಖ್ಯಾತ ವೈದ್ಯ ಆತ್ಮಹತ್ಯೆ!



















