ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಆಗಸ್ಟ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಈ ಮೂಲಕ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಈ ಹಿಂದೆ ನೀಡಿದ್ದ ಆದೇಶಕ್ಕೆ ತಾತ್ಕಾಲಿಕ ಸಡಿಲಿಕೆ ನೀಡಿದ ನ್ಯಾಯಾಲಯ, ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿ ಹೆಚ್ಚುವರಿ ಕಾಲಾವಕಾಶ ಮಂಜೂರು ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಿಗದಿತ ಅವಧಿಯಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಪರಿಷ್ಕರಿಸಿ ಹೆಚ್ಚಿನ ಸಮಯ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸರ್ಕಾರದ ವಾದವನ್ನು ಪರಿಗಣಿಸಿ ಆಗಸ್ಟ್ (ಆ.31) ಅಂತ್ಯದವರೆಗೆ ಗಡುವು ವಿಸ್ತರಿಸಿದೆ.
ಇದೇ ವೇಳೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದೆ. ಈಗ ನೀಡಿರುವ ಹೆಚ್ಚುವರಿ ಕಾಲಾವಕಾಶದೊಳಗೆಲೇ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮತ್ತೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾಲಾವಕಾಶ ಕೇಳಬಾರದು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ವಿಚಾರವು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಚುನಾವಣೆ ವಿಳಂಬದ ಬಗ್ಗೆ ವಿವಿಧ ವಲಯಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಸುಪ್ರೀಂ ಕೋರ್ಟ್ ಸ್ಪಷ್ಟ ಗಡುವು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಚುನಾವಣೆಯನ್ನು ಶೀಘ್ರ ಪೂರ್ಣಗೊಳಿಸುವ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ : ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ : 34 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 8 ಮಂದಿ ಅರೆಸ್ಟ್!


















