ಮಂಡ್ಯ : ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮದ್ದೂರಿನ ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ.
ಮದ್ದೂರಿನ ಚುಂಚಗಹಳ್ಳಿ ಗ್ರಾಮದ ನಿವಾಸಿ ಸುನೀಲ್ (29) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸುನೀಲ್ ತನ್ನ ಮೂವರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಮದ್ಯಪಾನ ಮಾಡಿಕೊಂಡು ತೆರಳುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಾರಿನಿಂದ ಇಳಿದ ಹಂತಕರು ಮಾರಕಾಸ್ತ್ರಗಳಿಂದ ಸುನೀಲ್ ಮೇಲೆ ನಿರ್ದಯವಾಗಿ ದಾಳಿ ನಡೆಸಿದ್ದು, ತೀವ್ರ ರಕ್ತಸ್ರಾವಗೊಂಡ ಸುನೀಲ್ ರಸ್ತೆ ಮೇಲೆಯೇ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲಿದ್ದ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸುನೀಲ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ವೇಳೆ ಬೈಕ್‌ನಲ್ಲಿದ್ದ ಸತೀಶ್ ಹಾಗೂ ಸಿದ್ದರಾಜು ಅವರಿಗೆ ಯಾವುದೇ ಗಾಯಗಳಾಗಿಲ್ಲ. ದುಷ್ಕರ್ಮಿಗಳು ನೇರವಾಗಿ ಸುನೀಲ್‌ನನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹಳೆಯ ದ್ವೇಷ ಅಥವಾ ವೈಯಕ್ತಿಕ ವೈಮನಸ್ಸಿನ ಹಿನ್ನೆಲೆಯಲ್ಲೇ ಕೊಲೆ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಬಿರುಗಾಳಿ ಸಮೇತ ಭಾರಿ ಮಳೆ : ಜನಜೀವನ ಸಂಪೂರ್ಣ ಅಸ್ತವ್ಯಸ್ತ!



















