ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಕ್ರಿಕೆಟ್ ಸ್ಟೇಡಿಯಂ ಯೋಜನೆಯನ್ನು ಕೈಬಿಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲೇ 80 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿರುವುದು ಪರಿಸರದ ದೃಷ್ಟಿಯಿಂದ ಅಪಾಯಕಾರಿ ಎಂದು ಪಕ್ಷ ಹೇಳಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಮುಖಂಡರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕಾವೇರಿ ವನ್ಯಜೀವಿ ಧಾಮ ಹಾಗೂ ಮಲೆಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ವನ್ಯಜೀವಿ ಕಾರಿಡಾರ್ ಆಗಿದ್ದು, ಇಲ್ಲಿ ಬೃಹತ್ ಕ್ರೀಡಾಂಗಣ ನಿರ್ಮಾಣವಾದರೆ ಅರಣ್ಯದ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ಧಾರೆ.

ಕ್ರೀಡಾಂಗಣದ ಫ್ಲಡ್ ಲೈಟ್, ಸಾವಿರಾರು ಪ್ರೇಕ್ಷಕರ ಗದ್ದಲ, ವಾಹನ ಸಂಚಾರ ದಟ್ಟಣೆ ಮತ್ತು ವ್ಯಾಪಾರೀಕರಣದಿಂದ ಅರಣ್ಯದ ಪ್ರಾಣಿ-ಪಕ್ಷಿಗಳಿಗೆ ತೀವ್ರ ತೊಂದರೆಯಾಗಲಿದೆ. ಜೊತೆಗೆ ಈ ಪ್ರದೇಶವು ಪರಿಸರ ಸೂಕ್ಷ್ಮ ವಲಯದ (ESZ) ವ್ಯಾಪ್ತಿಯಲ್ಲಿರುವ ಸಾಧ್ಯತೆ ಇದ್ದು, ಈ ಕುರಿತು ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿ ಹಾಗೂ ಡಿಪಿಆರ್‌ನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.
ಕರ್ನಾಟಕ ಗೃಹ ಮಂಡಳಿಯ ಮೂಲಕ ಸುಮಾರು 70 ಎಕರೆ ಪ್ರದೇಶದಲ್ಲಿ 900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಿಸಲು ಹಾಗೂ ಇನ್ನಷ್ಟು ಸಾವಿರ ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ರೂಪಿಸಲು ಯೋಜನೆ ರೂಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಲಕ್ಷಾಂತರ ಜನರು ಮನೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಇಂತಹ ಯೋಜನೆಗೆ ಆದ್ಯತೆ ನೀಡುತ್ತಿರುವುದನ್ನು ಕೆಆರ್‌ಎಸ್ ಪಕ್ಷ ಪ್ರಶ್ನಿಸಿದೆ.
ಇನ್ನು, ಈ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿರುವುದನ್ನೂ ಕೆಆರ್‌ಎಸ್ ಉಲ್ಲೇಖಿಸಿದೆ. ಪರಿಸರ ಸೂಕ್ಷ್ಮ ವಲಯವನ್ನು 268 ಚದರ ಕಿ.ಮೀ.ಯಿಂದ 168 ಚದರ ಕಿ.ಮೀ.ಗೆ ಇಳಿಸಿರುವ ವಿಚಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಕೇಂದ್ರ ಉನ್ನತಾಧಿಕಾರ ಸಮಿತಿ ನೀಡಿರುವ ವರದಿಯಲ್ಲಿ ಹಳೆಯ ಪರಿಸರ ಸೂಕ್ಷ್ಮ ವಲಯವನ್ನು ಮುಂದುವರಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದೆ.
ಈ ಭಾಗದಲ್ಲಿ ಸಮರ್ಪಕ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಪಂದ್ಯಾವಳಿ ಸಂದರ್ಭಗಳಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ. ಜೊತೆಗೆ ಬೆಂಗಳೂರಿನ ಉತ್ತರ ಭಾಗದಲ್ಲೇ ಈಗಾಗಲೇ ಕ್ರಿಕೆಟ್ ಮೈದಾನಗಳು ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೌಲಭ್ಯಗಳಿರುವಾಗ ಅರಣ್ಯದ ಸಮೀಪದಲ್ಲೇ ಹೊಸ ಕ್ರೀಡಾಂಗಣ ನಿರ್ಮಿಸುವ ಅವಶ್ಯಕತೆ ಏನು ಎಂದು ಕೆಆರ್‌ಎಸ್ ಪಕ್ಷ ಪ್ರಶ್ನಿಸಿದೆ. ರಾಜ್ಯ ಸರ್ಕಾರವು ಈ ಯೋಜನೆಯನ್ನು ಕೈಬಿಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೆಆರ್‌ಎಸ್ ಪಕ್ಷ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯಧ್ಯಕ್ಷರಾದ ರಘು ಜಾಣಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ಸಂಘಟನಾ ಕಾರ್ಯದರ್ಶಿ ರಘುನಂದನ, ವಕೀಲರಾದ ಅಭಿಷೇಕ ರಮೇಶ್, ಸೋಮಶೇಖರ್, ಶಿವಕುಮಾರ ಸ್ವಾಮಿ ಉಪಸ್ಥಿತರಿದ್ದರು.
ಇದನ್ನೂ ಓದಿ : ರಾಜ್ಯಾದ್ಯಂತ ಮುಂದುವರಿಯಲಿದೆ ಮಳೆ ಅಬ್ಬರ – 10 ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ!


















