ಬೆಂಗಳೂರು : ನಗರದ ಉತ್ತರ ವಿಭಾಗದ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ಸಾಮಾನ್ಯ ತಪಾಸಣೆ ವೇಳೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಚೀಲವನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಅದರೊಳಗೆ ಸುಮಾರು 13.41 ಕೆಜಿ ಗಾಂಜಾ ಸಿಕ್ಕಿದ್ದು, ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ.
ಅಬಕಾರಿ ಇಲಾಖೆಯವರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಮಾನ್ಯ ತಪಾಸಣೆ ನಡೆಯುತ್ತಿರುವುದನ್ನು ಗಮನಿಸಿದ ಗಾಂಜಾ ಸಾಗಾಟಗಾರರು ಚೀಲವನ್ನು ಫ್ಲಾಟ್‌ಫಾರ್ಮ್‌ನಲ್ಲೇ ಬಿಟ್ಟು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಚೀಲದಲ್ಲಿದ್ದ ಗಾಂಜಾವನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು, ಯಾರಿಗೆ ತಲುಪಬೇಕಾಗಿತ್ತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ.
ಗಾಂಜಾವನ್ನು ಯಾರು ತಂದಿದ್ದರು, ಯಾವ ರೈಲಿನಿಂದ ಸಾಗಿಸಲಾಗುತ್ತಿತ್ತು, ಎಲ್ಲಿ ಇಳಿಸಲಾಗಿದೆ ಎಂಬುದರ ಕುರಿತು ಸುಳಿವು ಪತ್ತೆಹಚ್ಚಲು ಅಬಕಾರಿ ಇಲಾಖೆ ಅಧಿಕಾರಿಗಳು ಯಶವಂತಪುರ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಫ್ಲಾಟ್‌ಫಾರ್ಮ್‌ನಲ್ಲಿ ಚೀಲವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ರೈಲ್ವೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಮಾದಕ ವಸ್ತು ಸಾಗಾಟದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಬಕಾರಿ ಇಲಾಖೆ ತಪಾಸಣೆ ಮತ್ತಷ್ಟು ತೀವ್ರಗೊಳಿಸಿದೆ. ಕಯಶವಂತಪುರ ರೈಲ್ವೆ ನಿಲ್ದಾಣದಲ್ಲಿ 13.41 ಕೆಜಿ ಗಾಂಜಾ ಪತ್ತೆಯಾಗಿರುವುದು ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ಹುಟ್ಟಿಸಿದ್ದು, ಆರೋಪಿಗಳನ್ನು ಪತ್ತೆ ಮಾಡಲು ಅಧಿಕಾರಿಗಳು ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ತಮಾಷೆಯೋ? ವರ್ಣ ನಿಂದನೆಯೋ? ತಿಲಕ್ ವರ್ಮಾಗೆ ‘ಅಂಧೇರೆ’ ಎಂದು ಕರೆದು ವಿವಾದಕ್ಕೀಡಾದ ಅರ್ಷದೀಪ್!



















