ಬೆಂಗಳೂರು : ರಾಜ್ಯ ಸರ್ಕಾರವು ಶಾಲೆ ಹಾಗೂ ಕಾಲೇಜುಗಳ ವಸ್ತ್ರ ಸಂಹಿತೆ ಕುರಿತಾಗಿ ಮಹತ್ವದ ಬದಲಾವಣೆ ಮಾಡಿದ್ದು, 2022ರಲ್ಲಿ ಜಾರಿಯಾಗಿದ್ದ ಹಿಜಾಬ್ ನಿರ್ಬಂಧ ಸಂಬಂಧಿತ ಆದೇಶವನ್ನು ಹಿಂಪಡೆದು, ಸಮವಸ್ತ್ರದೊಂದಿಗೆ “ಸೀಮಿತ ಸಾಂಪ್ರದಾಯಿಕ ಉಡುಪು” ಧರಿಸಲು ಅವಕಾಶ ನೀಡಿದೆ. ಈ ನಿರ್ಧಾರ ರಾಜ್ಯದ ರಾಜಕೀಯ ಹಾಗೂ ಶಿಕ್ಷಣ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
ಸರ್ಕಾರದ ನಿಲುವೇನು?
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮಕ್ಕಳ ಶಿಕ್ಷಣಕ್ಕೆ ಯಾವುದೇ ನಂಬಿಕೆ ಅಥವಾ ಆಚರಣೆ ಅಡ್ಡಿಯಾಗಬಾರದು. ಸಮವಸ್ತ್ರದ ಗೌರವ ಉಳಿಯುವಂತೆ, ವಿದ್ಯಾರ್ಥಿಗಳು ಸೀಮಿತ ಸಾಂಪ್ರದಾಯಿಕ ಗುರುತು ಧರಿಸಲು ಅವಕಾಶ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಹೊಸ ಮಾರ್ಗಸೂಚಿಯ ಪ್ರಕಾರ ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್, ಪೇಟ (ಟರ್ಬನ್), ಜನಿವಾರ, ಶಿವದಾರ, ರುದ್ರಾಕ್ಷಿ ಸೇರಿದಂತೆ ಕೆಲವು ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಬಹುದಾಗಿದೆ. ಆದರೆ ಅವು ಸಮವಸ್ತ್ರಕ್ಕೆ ಪೂರಕವಾಗಿರಬೇಕು, ಶಾಲೆಯ ಶಿಸ್ತಿಗೆ ಧಕ್ಕೆಯಾಗಬಾರದು,
ಶಿಕ್ಷಣ ಚಟುವಟಿಕೆಗೆ ಅಡ್ಡಿಯಾಗಬಾರದು ಎಂದು ಸರ್ಕಾರ ಸೂಚಿಸಿದೆ.
ಅದೇ ವೇಳೆ, ಯಾವುದೇ ವಿದ್ಯಾರ್ಥಿಗೆ ಇಂತಹ ಉಡುಪು ಧರಿಸಿರುವ ಕಾರಣಕ್ಕೆ ತರಗತಿ ಅಥವಾ ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಿಸಬಾರದು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ವಸ್ತ್ರ ಸಂಹಿತೆ ನಿಯಮಗಳು ಯಥಾಸ್ಥಿತಿಯಲ್ಲೇ ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.
“ಒತ್ತಾಯವೂ ಬೇಡ, ತಡೆಯೂ ಬೇಡ”
ಸರ್ಕಾರ ತನ್ನ ನಿಲುವಿನಲ್ಲಿ “ಒತ್ತಾಯ ಮಾಡುವಂತಿಲ್ಲ, ತಡೆಯುವಂತಿಲ್ಲ” ಎಂಬ ಸಮತೋಲನದ ಮಾತು ಹೇಳಿದೆ. ವಿದ್ಯಾರ್ಥಿಗಳು ಬಯಸಿದರೆ ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಜನಿವಾರ ಪ್ರಕರಣ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಯಾರ ಧಾರ್ಮಿಕ ಆಚರಣೆಯಿಗೂ ನೋವಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಆತ್ಮಗೌರವಕ್ಕೆ ಧಕ್ಕೆಯಾಗಬಾರದು” ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತಾನಾಡಿ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, “ಇದು ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗುವ ಆದೇಶ. ಮಕ್ಕಳು ಮುಕ್ತ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಇದು ಸಹಕಾರಿ” ಎಂದು ಅಭಿಪ್ರಾಯಪಟ್ಟರು.
ವಿರೋಧದ ಸ್ವರ :
ಇನ್ನೊಂದೆಡೆ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಮೋಹನ್‌ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಸಮವಸ್ತ್ರದ ಉದ್ದೇಶವೇ ಬೇಧ-ಭಾವ ತಪ್ಪಿಸುವುದು. ಜನಿವಾರ ಅಥವಾ ಶಿವದಾರ ಅಂಗಿಯೊಳಗೆ ಧರಿಸುವುದು. ಆದರೆ ಹಿಜಾಬ್ ಹಾಗಲ್ಲ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಗೆ ಮುಂದಾಗಿದೆ” ಎಂದು ಆರೋಪಿಸಿದರು. ಅವರು ಸರ್ಕಾರ ಈ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೆ ರಾಜಕೀಯ ಕಾವೇ?
ಸರ್ಕಾರದ ಈ ನಿರ್ಧಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು “ಸಮವಸ್ತ್ರಕ್ಕೆ ಕಿಮ್ಮತ್ತು ಇಲ್ಲವೇ?” “ಹಿಜಾಬ್‌ಗೆ ಅವಕಾಶ ಇದ್ದರೆ ಕೇಸರಿ ಶಾಲಿಗೆ ಯಾಕಿಲ್ಲ?” “ಜಿಬಿಎ ಚುನಾವಣೆಗೆ ಅಲ್ಪಸಂಖ್ಯಾತರ ಮತ ಸೆಳೆಯುವ ರಾಜಕೀಯವೇ?” ಎಂಬ ಪ್ರಶ್ನೆಗಳನ್ನು ಎತ್ತುತ್ತಿವೆ.
ಇನ್ನೊಂದೆಡೆ ಸರ್ಕಾರ ಇದನ್ನು “ಜಾತ್ಯತೀತತೆ ಮತ್ತು ವೈಯಕ್ತಿಕ ನಂಬಿಕೆಗಳ ನಡುವಿನ ಸಮತೋಲನ” ಎಂದು ಸಮರ್ಥಿಸಿಕೊಂಡಿದೆ.
ಈ ಆದೇಶ ಜಾರಿಗೆ ಬಂದ ಬಳಿಕ ಶಾಲಾ ವಾತಾವರಣದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಇದನ್ನೂ ಓದಿ : ರಾಯ್‌ಪುರದಲ್ಲಿ ಕಿಂಗ್ ಕೊಹ್ಲಿ ದರ್ಬಾರ್ : ದಾಖಲೆಗಳ ಸುರಿಮಳೆ!


















