ಆಸ್ಟ್ರಿಯಾ : ಮಾಜಿ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಅವರ ವೈಯಕ್ತಿಕ ಬದುಕು ಇದೀಗ ಬೀದಿಗೆ ಬಿದ್ದಿದ್ದು, ತಮ್ಮ ಮಕ್ಕಳಿಗಾಗಿ ಅವರು ನಡೆಸುತ್ತಿರುವ ಕಾನೂನು ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಸ್ಟ್ರಿಯಾದಲ್ಲಿ ತಮ್ಮ ಮೃತ ಮಗನ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾ ಕಣ್ಣೀರಿಡುತ್ತಿರುವ ಭಾವುಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ಪತಿ ಪೀಟರ್ ಹಾಗ್ ಅವರಿಂದ ವಿಚ್ಛೇದನ ಪಡೆಯಲು ಆಸ್ಟ್ರಿಯಾಕ್ಕೆ ತೆರಳಿದ್ದ ಸೆಲಿನಾ ಜೇಟ್ಲಿ, ಅಲ್ಲಿನ ನ್ಯಾಯಾಲಯದ ವಿಚಾರಣೆ ಮುಗಿಸಿ ತಮ್ಮ ಮೃತ ಮಗ ಶಂಶೇರ್ ಸಮಾಧಿಗೆ ಭೇಟಿ ನೀಡಿದ್ದಾರೆ. ಸಮಾಧಿಯ ಮೇಲಿದ್ದ ಕಸವನ್ನು ಸ್ವಚ್ಛಗೊಳಿಸುತ್ತಾ ಅವರು ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ನನ್ನ ಮಕ್ಕಳನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಅವರನ್ನು ನನ್ನ ಬಳಿ ಕರೆತರುತ್ತಿಲ್ಲ. ನಾನು ಭೇಟಿಯಾಗಲು ಸಾಧ್ಯವಾದ ಏಕೈಕ ಮಗನೆಂದರೆ ಈತ (ಶಂಶೇರ್), ಆದರೆ ಅವನು ಇಂದು ಬದುಕಿಲ್ಲ” ಎಂದು ಸೆಲಿನಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪತಿಯ ವಿರುದ್ಧ ಗಂಭೀರ ಆರೋಪಗಳು
ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಪತಿ ಪೀಟರ್ ವಿರುದ್ಧ ಹರಿಹಾಯ್ದಿರುವ ಸೆಲಿನಾ, “ಪತಿಯ ವೃತ್ತಿಜೀವನಕ್ಕಾಗಿ ನಾನು ನನ್ನ ದೇಶ, ತಂದೆ-ತಾಯಿ ಹಾಗೂ ಉದ್ಯೋಗವನ್ನು ಬಿಟ್ಟು ದುಬೈ, ಸಿಂಗಾಪುರ ಹಾಗೂ ಆಸ್ಟ್ರಿಯಾದ ನಡುವೆ ಅಲೆದಾಡಿದೆ. ಆದರೆ ನನ್ನ ಆಸ್ತಿಗಳನ್ನು ಕಿತ್ತುಕೊಳ್ಳಲಾಯಿತು, ನಾನು ಶೋಷಣೆಗೆ ಒಳಗಾಗಿದ್ದೇನೆ. ಈಗ ನನ್ನ ಮೂವರು ಮಕ್ಕಳೊಂದಿಗೆ ಮಾತನಾಡಲು ಸಹ ನನಗೆ ಅವಕಾಶ ನೀಡುತ್ತಿಲ್ಲ. ಮಕ್ಕಳ ತಲೆಯನ್ನು ಕೆಡಿಸಿ ನನ್ನ ವಿರುದ್ಧವೇ ತಿರುಗಿಬೀಳುವಂತೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. 15ನೇ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಕೊಡಿಸುವುದಾಗಿ ನಂಬಿಸಿ ತನ್ನ ಪತಿ ವಿಚ್ಛೇದನದ ನೋಟಿಸ್ ನೀಡಿದ ಘಟನೆಯನ್ನೂ ಅವರು ನೆನೆದಿದ್ದಾರೆ.
ತ್ಯಾಗಕ್ಕೆ ಸಿಗದ ಬೆಲೆ
ಸೆಲಿನಾ ಮತ್ತು ಪೀಟರ್ 2010ರಲ್ಲಿ ವಿವಾಹವಾಗಿದ್ದರು. 2012ರಲ್ಲಿ ಅವಳಿ ಗಂಡು ಮಕ್ಕಳು (ವಿನ್ಸ್‌ಟನ್ ಮತ್ತು ವಿರಾಜ್) ಜನಿಸಿದ್ದರು. 2017ರಲ್ಲಿ ಮತ್ತೆ ಅವಳಿ ಗಂಡು ಮಕ್ಕಳು (ಆರ್ಥರ್ ಮತ್ತು ಶಂಶೇರ್) ಜನಿಸಿದರಾದರೂ, ಹೃದಯ ಸಂಬಂಧಿ ಸಮಸ್ಯೆಯಿಂದ ಶಂಶೇರ್ ಸಾವನ್ನಪ್ಪಿದ್ದ. ಈಗ ಉಳಿದ ಮೂವರು ಮಕ್ಕಳ ಕಸ್ಟಡಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. “ಮಕ್ಕಳ ಕ್ಷೇಮಕ್ಕಾಗಿ ನಾನು ಶಾಂತಿಯುತವಾಗಿ ಬೇರೆಯಾಗಲು ಬಯಸಿದ್ದೆ. ಆದರೆ ನನ್ನ ವೈಯಕ್ತಿಕ ಆಸ್ತಿಗಳನ್ನು ಕಬಳಿಸಲು ನನ್ನ ಮೇಲೆ ಅಮಾನವೀಯ ಷರತ್ತುಗಳನ್ನು ಹೇರಲಾಗುತ್ತಿದೆ” ಎಂದು ಸೆಲಿನಾ ಆಕ್ರೋಶ ಹೊರಹಾಕಿದ್ದಾರೆ. ಈ ಭಾವುಕ ಪೋಸ್ಟ್ ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಸೆಲಿನಾ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಒಬ್ಬ ತಾಯಿಯಾಗಿ ತಮ್ಮ ಮಕ್ಕಳನ್ನು ಭೇಟಿ ಮಾಡಲು ಹಂಬಲಿಸುತ್ತಿರುವ ಅವರ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ



















