ಬೀದರ್ : ಬೀದರ್‌ನಲ್ಲಿ ಮನೆಯ ಮ್ಯೂಟೇಷನ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ 2.5 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಈ ದಾಳಿ ನಡೆದಿದೆ.
ಬೀದರ್ ತಾಲೂಕಿನ ಮರಗುಂದಾ ಗ್ರಾಮದ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಮರಕುಂದಾ ಗ್ರಾಮದ ನಿವಾಸಿ ಮಹಾದೇವ್ ಶಾಂತಪ್ಪ ಎಂಬುವವರು ತಮ್ಮ ಮನೆಯ ಮ್ಯೂಟೇಷನ್ (ಖಾತಾ ಬದಲಾವಣೆ) ಮಾಡಿಕೊಡುವಂತೆ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರ ಬಳಿ ಮನವಿ ಮಾಡಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಶಿವಕುಮಾರ್ ಬರೋಬ್ಬರಿ 5 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಲಂಚದ ಹಣ ನೀಡಲು ಇಚ್ಛಿಸದ ಮಹಾದೇವ್ ಅವರು ಬೀದರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ, ಮರಕುಂದಾ ಗ್ರಾಮದ ಹೊರವಲಯದಲ್ಲಿರುವ ದಾಬಾವೊಂದರಲ್ಲಿ ಲಂಚದ ಹಣದ ಮೊದಲ ಕಂತು 2.5 ಲಕ್ಷ ರೂಪಾಯಿಯನ್ನು ನೀಡಲು ನಿರ್ಧರಿಸಲಾಗಿತ್ತು. ಹಣವನ್ನು ಸ್ವೀಕರಿಸಲು ಶಿವಕುಮಾರ್ ತನ್ನ ಸಹಚರ ಶರಣಯ್ಯ ಎಂಬಾತನೊಂದಿಗೆ ಆಗಮಿಸಿದ್ದನು.
ಮಹಾದೇವ್ ಅವರಿಂದ 2.5 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ, ಸುತ್ತುವರಿದಿದ್ದ ಲೋಕಾಯುಕ್ತ ಅಧಿಕಾರಿಗಳು ಶಿವಕುಮಾರ್ ಮತ್ತು ಆತನ ಸಹಚರ ಶರಣಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಬೀದರ್ ಲೋಕಾಯುಕ್ತ ಡಿಎಸ್‌ಪಿ ಹಣಮಂತರಾಯ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : SRH ವಿರುದ್ಧ ಗೆಲುವಿನ ಲಯಕ್ಕೆ ಮರಳಲು ಶ್ರೇಯಸ್ ಪಡೆ ಕಸರತ್ತು – ಪ್ಲೇಆಫ್‌ಗೂ ಮುನ್ನ ಪ್ರತಿಷ್ಠೆಯ ಕದನ!


















