ಜೈಪುರ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯಲ್ಲಿ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್, ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಭರವಸೆಯ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ ತೋರಿದ ಆಕ್ರಮಣಕಾರಿ ವರ್ತನೆ ಎಲ್ಲರ ಗಮನ ಸೆಳೆದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಡುವಲ್ಲಿ ಜೇಮಿಸನ್ ಈ ಮೂಲಕ ಪ್ರಮುಖ ಪಾತ್ರ ವಹಿಸಿದರು.
ಯುವ ಬ್ಯಾಟರ್‌ಗೆ ಜೇಮಿಸನ್ ಯಾರ್ಕರ್ ಅಸ್ತ್ರ
ಅತ್ಯುತ್ತಮ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಟೂರ್ನಿಯ ದಿಗ್ಗಜ ವೇಗಿಗಳನ್ನೂ ನಿರ್ಭೀತಿಯಿಂದ ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಈ ಪಂದ್ಯದಲ್ಲೂ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸುವ ಮೂಲಕ ಅಬ್ಬರಿಸುವ ಮುನ್ಸೂಚನೆ ನೀಡಿದ್ದರು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ನ್ಯೂಜಿಲೆಂಡ್ ಮೂಲದ ವೇಗಿ ಕೈಲ್ ಜೇಮಿಸನ್, ಅತ್ಯುತ್ತಮ ಲೆಂಗ್ತ್ ಕಾಯ್ದುಕೊಳ್ಳುವ ಮೂಲಕ ತಿರುಗೇಟು ನೀಡಿದರು.
ತಮ್ಮ ನಿಖರವಾದ ಇನ್-ಸ್ವಿಂಗಿಂಗ್ ಯಾರ್ಕರ್ ಮೂಲಕ ಸೂರ್ಯವಂಶಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಜೇಮಿಸನ್ ಯಶಸ್ವಿಯಾದರು. ಇದಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ ಅವರು ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಜೇಮಿಸನ್ ಅವರ ಈ ಯಶಸ್ಸು ಡೆಲ್ಲಿ ತಂಡದ ಬಿಗಿ ಹಿಡಿತಕ್ಕೆ ಕಾರಣವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಚರ್ಚೆ
ವಿಕೆಟ್ ಪಡೆದ ನಂತರ ಜೇಮಿಸನ್ ತೋರಿದ ಆಚರಣೆ ಮತ್ತು ಕೇವಲ 15 ವರ್ಷದ ಬಾಲಕನತ್ತ ಅವರು ತೀಕ್ಷ್ಣವಾಗಿ ದಿಟ್ಟಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಕೆಟ್ ಪತನದ ವಿಡಿಯೋ ವೈರಲ್ ಆಗುತ್ತಲೇ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕೆಲವರು ಅಂತರಾಷ್ಟ್ರೀಯ ಮಟ್ಟದ ಬೌಲರ್ ಒಬ್ಬರು ಇಷ್ಟು ಚಿಕ್ಕ ವಯಸ್ಸಿನ ಆಟಗಾರನಿಗೆ ಇಷ್ಟೊಂದು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದು ಅಚ್ಚರಿ ತರಿಸಿದೆ ಎಂದಿದ್ದಾರೆ. ಮತ್ತೆ ಕೆಲವರು, ಸೂರ್ಯವಂಶಿ ಅವರ ಭಯಮುಕ್ತ ಬ್ಯಾಟಿಂಗ್ ಅಂತಾರಾಷ್ಟ್ರೀಯ ಬೌಲರ್‌ಗಳ ಮೇಲೂ ಒತ್ತಡ ಹೇರುತ್ತಿದೆ ಎಂಬುದಕ್ಕೆ ಜೇಮಿಸನ್ ಅವರ ಈ ಪ್ರತಿಕ್ರಿಯೆಯೇ ಸಾಕ್ಷಿ ಎಂದು ವಿಶ್ಲೇಷಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾದಾಗ ಈ ಯುವ ಆಟಗಾರ ಖಂಡಿತವಾಗಿಯೂ ಇದನ್ನು ನೆನಪಿನಲ್ಲಿಟ್ಟುಕೊಂಡು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ವಿವಾದಗಳ ನಡುವೆಯೂ ಅಬ್ಬರಿಸಿದ ರಿಯಾನ್ ಪರಾಗ್!



















