ಧಾರವಾಡ : ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ.
ಕಳೆದ ಶನಿವಾರ ವಿದ್ಯಾಗಿರಿ ಪೊಲೀಸರು ಆದಿತ್ಯ ಮ್ಯಾಗೇರಿ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಗಾಂಜಾ ಸೇವನೆ ಬಗ್ಗೆ ಡ್ರಗ್ ಟೆಸ್ಟ್ ನಡೆಸಿದಾಗ ಆದಿತ್ಯ ಮ್ಯಾಗೇರಿಗೆ ನೆಗೆಟಿವ್ ರಿಪೋರ್ಟ್ ಬಂದಿತ್ತು.
ನೆಗೆಟಿವ್ ವರದಿ ಬಂದಿದ್ದರಿಂದ ಆದಿತ್ಯನನ್ನು ಬಿಟ್ಟು ಕಳುಹಿಸಲಾಗಿತ್ತು. ನಂತರ ಹಣ ನೀಡುವಂತೆ ಪೊಲೀಸರು 2 ದಿನಗಳಿಂದ ಆದಿತ್ಯನಿಗೆ ಕಾಡುತ್ತಿದ್ದ ಆರೋಪವನ್ನು ಮೃತನ ತಾಯಿ ಕವಿತಾ ಮಾಡಿದ್ದಾರೆ.
ಪೊಲೀಸರು ಹಣ ಕೇಳಿದ್ದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿ ಆದಿತ್ಯ ನಿನ್ನೆ ತಾಯಿಯ ಬಳಿ 2 ಸಾವಿರ ಹಣ ಕೇಳಿದ್ದ. ಆದರೆ, ಆಕೆ ಹಣ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಆದಿತ್ಯ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಗನ ಸಾವಿನಿಂದಾಗಿ ಆದಿತ್ಯ ಮ್ಯಾಗೇರಿ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದು, ನನ್ನ ಮಗ ಸಾಯಲು ಪೊಲೀಸರೇ ಕಾರಣ ಎಂದು ಕಣ್ಣೀರಿಟ್ಟಿದ್ದಾರೆ. ಮಗನ ಶವವಿದ್ದ ಶವಗಾರದ ಮುಂದೆ ಆದಿತ್ಯ ತಾಯಿ ಕಣ್ಣೀರಾಕಿದ್ದಾರೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ 18 ವರ್ಷದ ಸಾಹಿಲ್ ಪಾರಖ್ ಯಾರು? ಇಲ್ಲಿದೆ ಮಾಹಿತಿ



















