ಹರಾರೆ: ವಿಶ್ವಪ್ರಸಿದ್ಧ ವಿಕ್ಟೋರಿಯಾ ಫಾಲ್ಸ್ ಸಮೀಪವಿರುವ ಜಿಂಬಾಬ್ವೆಯ ಐಷಾರಾಮಿ ಹೋಟೆಲ್‌ವೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೆಳ್ಳಂಬೆಳಿಗ್ಗೆ ಹೋಟೆಲ್ ಆವರಣಕ್ಕೆ ನುಗ್ಗಿದ ಬರೋಬ್ಬರಿ 12 ಅಡಿ ಉದ್ದದ ಬೃಹತ್ ನೈಲ್ ಮೊಸಳೆಯೊಂದು, ಹೋಟೆಲ್‌ನ ರಿಸೆಪ್ಷನ್ ಮತ್ತು ಅಡುಗೆ ಕೋಣೆಯಲ್ಲಿ ಅಡ್ಡಾಡುವ ಮೂಲಕ ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಈ ದೃಶ್ಯಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಜಿಂಬಾಬ್ವೆಯ ‘ಎ ಜಾಂಬೆಜಿ ರಿವರ್ ಲಾಡ್ಜ್’ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಮೀಪದ ಜಾಂಬೆಜಿ ನದಿಯಿಂದ ದಾರಿ ತಪ್ಪಿ ಬಂದ ಈ ಮೊಸಳೆ, ಅತ್ಯಂತ ನಿರಾಳವಾಗಿ ಹೋಟೆಲ್ ಪ್ರವೇಶಿಸಿದೆ. ಅಲ್ಲಿ ತಂಗಿದ್ದ ಬ್ರಿಟಿಷ್ ಪ್ರವಾಸಿ ಜಾನ್ ರಿಚರ್ಡ್ಸ್ ಎಂಬುವವರ ಪ್ರಕಾರ, “ಮೊಸಳೆಯು ತಾನು ಹಣ ಪಾವತಿಸಿ ಉಳಿದುಕೊಳ್ಳಲು ಬಂದ ಅತಿಥಿಯಂತೆ ವರ್ತಿಸುತ್ತಿತ್ತು. ಅದು ಮೊದಲು ರಿಸೆಪ್ಷನ್ ಡೆಸ್ಕ್ ಏರಲು ಯತ್ನಿಸಿತು, ನಂತರ ಅಲ್ಲಿದ್ದ ಸೋಫಾ ಮೇಲೆ ವಿಶ್ರಾಂತಿ ಪಡೆದು, ಆಹಾರ ಹುಡುಕುತ್ತಾ ನೇರವಾಗಿ ಅಡುಗೆ ಕೋಣೆಯ ಕೌಂಟರ್ ಮೇಲೆ ಹತ್ತಿ ಕುಳಿತು ಅಚ್ಚರಿ ಮೂಡಿಸಿತು” ಎಂದು ವಿವರಿಸಿದ್ದಾರೆ.
ಹೋಟೆಲ್ ಸಿಬ್ಬಂದಿಯ ಹಾಸ್ಯಭರಿತ ಪ್ರತಿಕ್ರಿಯೆ
ಈ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಹೋಟೆಲ್ ಆಡಳಿತ ಮಂಡಳಿ, “ನಮ್ಮ ಹೋಟೆಲ್‌ನ ಅಮುಲೋಂಗಾ ರೆಸ್ಟೋರೆಂಟ್‌ಗೆ ಶುಕ್ರವಾರ ಮುಂಜಾನೆ ಅನಿರೀಕ್ಷಿತ ಅತಿಥಿಯೊಬ್ಬರು ಭೇಟಿ ನೀಡಿದ್ದರು. ಬಹುಶಃ ರೂಮ್ ಸರ್ವಿಸ್ ಯಾಕೆ ತಡವಾಯಿತು ಎಂದು ವಿಚಾರಿಸಲು ಅವರು ಬಂದಿರಬೇಕು! ಯಾವುದೇ ನಿಯಮಗಳಿಲ್ಲ, ಆಮಂತ್ರಣವಿಲ್ಲ, ರಿಸರ್ವೇಶನ್ ಇಲ್ಲ. ಇದೇ ಜಾಂಬೆಜಿ – ಇಲ್ಲಿ ಕಾಡು ಎಂದರೆ ನಿಜಕ್ಕೂ ಕಾಡು” ಎಂದು ತಮಾಷೆಯಾಗಿ ಬರೆದುಕೊಂಡಿದೆ. ಮೊಸಳೆಯು ಕೊನೆಗೆ ಹೋಟೆಲ್‌ನ ಹೊರಭಾಗದ ವಾಟರ್ ಫೌಂಟೇನ್‌ನಲ್ಲಿ ಸೆಟಲ್ ಆಗಿತ್ತು ಎಂದು ವರದಿಯಾಗಿದೆ.
ಅಂತಿಮವಾಗಿ ನದಿಗೆ ಸೇರಿದ ಜಲಚರ
ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ. ತಕ್ಷಣವೇ ಎಚ್ಚೆತ್ತ ಹೋಟೆಲ್ ಸಿಬ್ಬಂದಿ ಜಿಂಬಾಬ್ವೆ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ತಜ್ಞರು ಹಗ್ಗ ಮತ್ತು ಕ್ಯಾನ್ವಾಸ್ ಬಳಸಿ ಮೊಸಳೆಯನ್ನು ಸುರಕ್ಷಿತವಾಗಿ ಬಂಧಿಸಿ, ನಂತರ ಮತ್ತೆ ಜಾಂಬೆಜಿ ನದಿಗೆ ಬಿಟ್ಟಿದ್ದಾರೆ. ವನ್ಯಜೀವಿಗಳ ವಾಸಸ್ಥಾನಕ್ಕೆ ಹತ್ತಿರದಲ್ಲಿ ಹೋಟೆಲ್ ಇರುವುದರಿಂದ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಸಿಬ್ಬಂದಿಗೆ ಇವುಗಳನ್ನು ನಿಭಾಯಿಸಲು ವಿಶೇಷ ತರಬೇತಿ ನೀಡಲಾಗಿದೆ ಎಂದು ಹೋಟೆಲ್ ವಕ್ತಾರರು ತಿಳಿಸಿದ್ದಾರೆ. ನೈಲ್ ಮೊಸಳೆಗಳು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಬಲಿಷ್ಠ ಕಡಿತ ಹೊಂದಿರುವ ಪ್ರಾಣಿಗಳೆಂದು ಗುರುತಿಸಲ್ಪಟ್ಟಿವೆ.
ಇದನ್ನೂ ಓದಿ: ಅಮೆರಿಕದ ಪರ ಒಲವು : ‘ಮಧ್ಯಸ್ಥಿಕೆದಾರ’ ಪಾಕಿಸ್ತಾನದ ವಿರುದ್ಧ ಇರಾನ್ ಸಂಸದನ ಗಂಭೀರ ಆರೋಪ!


















