ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಮತ್ತು ಶ್ರೀಮಂತ ಫ್ರಾಂಚೈಸಿ ಟೂರ್ನಿಯಾಗಿದ್ದು, ಇದರಲ್ಲಿ ಆಡಲು ಪ್ರತಿಯೊಬ್ಬ ಆಟಗಾರನೂ ಹಾತೊರೆಯುತ್ತಾನೆ. ಆದರೆ ಕೆಲವೊಮ್ಮೆ ಆಟಗಾರರು ಮತ್ತು ಅವರ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳ ನಡುವಿನ ನಿಯಮಾವಳಿಗಳ ಸಂಘರ್ಷ, ಐಪಿಎಲ್ ಕನಸಿಗೆ ಕಲ್ಲು ಹಾಕುತ್ತದೆ.
ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ ಸಿ) ನಡುವೆ ಇತ್ತೀಚೆಗೆ ನಡೆದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ವಿವಾದ ಇದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು. ಆದರೆ ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ನುವಾನ್ ತುಷಾರ ತಾವು ಲಂಕಾ ಕ್ರಿಕೆಟ್ ಬೋರ್ಡ್ ವಿರುದ್ಧ ಹೂಡಿದ್ದ ಕಾನೂನು ಹೋರಾಟವನ್ನು ಹಿಂಪಡೆದುಕೊಂಡಿದ್ದಾರೆ. ಇದರೊಂದಿಗೆ ಕಳೆದ ಕೆಲ ವಾರಗಳಿಂದ ಶ್ರೀಲಂಕಾ ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಈ ಹೈ-ಪ್ರೊಫೈಲ್ ವಿವಾದಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.
ಫಿಟ್ನೆಸ್ ನಿಯಮ ಮತ್ತು ಎನ್‌ಒಸಿ ನಿರಾಕರಣೆ
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇತ್ತೀಚೆಗೆ ತನ್ನ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ಕಡ್ಡಾಯಗೊಳಿಸಿತ್ತು. ಈ ನಿಯಮದ ಅಡಿಯಲ್ಲಿ ಆಟಗಾರರು 2 ಕಿಲೋಮೀಟರ್ ಓಟದ ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ 2022ರಲ್ಲಿ ಪದಾರ್ಪಣೆ ಮಾಡಿ ಸುಮಾರು 30 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ವೇಗಿ ನುವಾನ್ ತುಷಾರ, ಈ ಫಿಟ್ನೆಸ್ ಮಾನದಂಡವನ್ನು ತಲುಪುವಲ್ಲಿ ವಿಫಲರಾಗಿದ್ದರು.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ವಿದೇಶಿ ಲೀಗ್‌ಗಳಲ್ಲಿ ಆಡಲು ಅತ್ಯಗತ್ಯವಾದ ಎನ್‌ಒಸಿಯನ್ನು ತುಷಾರಗೆ ನಿರಾಕರಿಸಿತು. ಮಂಡಳಿಯ ಈ ನಿರ್ಧಾರವು ತಮ್ಮ ವೃತ್ತಿಪರ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ ಮತ್ತು ಇದು ತಮಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿ ತುಷಾರ ಕೊಲಂಬೊ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವಿರುದ್ಧ ಆಟಗಾರನೊಬ್ಬ ಈ ರೀತಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಲಂಕಾ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಪರೂಪದ ಘಟನೆಯಾಗಿತ್ತು.
ನ್ಯಾಯಾಲಯದಲ್ಲಿ ಕೇಸ್ ವಾಪಸ್ ಮತ್ತು ಕ್ಷಮೆಯಾಚನೆ
ಐಪಿಎಲ್ 2026ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪ್ರತಿನಿಧಿಸಬೇಕಿದ್ದ ತುಷಾರ, ನ್ಯಾಯಾಲಯದಿಂದ ತಮಗೆ ರಿಲೀಫ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಗುರುವಾರ ನಡೆದ ವಿಚಾರಣೆ ವೇಳೆ ತುಷಾರ ಪರ ವಕೀಲರು, ಅರ್ಜಿಯನ್ನು ಹಿಂಪಡೆಯಲು ತಮ್ಮ ಕಕ್ಷಿದಾರರು ಬಯಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಐಪಿಎಲ್ 2026ರ ಟೂರ್ನಿಯ ಬಹುಪಾಲು ಪಂದ್ಯಗಳು ಈಗಾಗಲೇ ಮುಗಿದಿರುವುದರಿಂದ, ಈ ಪ್ರಕರಣವನ್ನು ಮುಂದುವರಿಸುವುದರಲ್ಲಿ ಯಾವುದೇ ಪ್ರಾಯೋಗಿಕ ಮೌಲ್ಯವಿಲ್ಲ. ಜೊತೆಗೆ, ಕಾಲಮಿತಿಯ ದೃಷ್ಟಿಯಿಂದ ನೋಡಿದರೂ ಈ ವಿಚಾರವಾಗಿ ಮತ್ತಷ್ಟು ಹೋರಾಟ ನಡೆಸುವುದು ಪ್ರಯೋಜನಕಾರಿಯಲ್ಲ ಎಂಬುದು ತುಷಾರ ಅವರ ವಕೀಲರ ವಾದವಾಗಿತ್ತು.
ಈ ಹಿನ್ನೆಲೆಯಲ್ಲಿ ಕೊಲಂಬೊ ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಅಷ್ಟೇ ಅಲ್ಲದೆ, ಈ ವಿವಾದದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಉಂಟಾಗಿದ್ದ ಬಿರುಕನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನುವಾನ್ ತುಷಾರ ಮಂಡಳಿಗೆ ಕ್ಷಮೆಯಾಚಿಸಿದ್ದು, ಈ ಘಟನೆಯನ್ನು ಮರೆತು ಮುಂದೆ ಸಾಗುವ ಒಲವು ತೋರಿದ್ದಾರೆ.
ಆರ್‌ಸಿಬಿ ಪಾಲಿಗೆ ನಿರಾಸೆ ಮೂಡಿಸಿದ್ದ ಎನ್‌ಒಸಿ ವಿವಾದ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನುವಾನ್ ತುಷಾರ ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿದ್ದರು. 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ 4.80 ಕೋಟಿ ರೂಪಾಯಿಗಳಿಗೆ ಸೇರ್ಪಡೆಯಾಗಿ ಎಂಟು ವಿಕೆಟ್ ಕಬಳಿಸಿ ಮಿಂಚಿದ್ದರು. 2025ರ ಮೆಗಾ ಹರಾಜಿನಲ್ಲಿ 1.60 ಕೋಟಿ ರೂ.ಗಳಿಗೆ ಖರೀದಿಯಾಗಿದ್ದ ಅವರು, ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅವರ ಈ ಹಿಂದಿನ ಪ್ರದರ್ಶನವನ್ನು ಗಮನಿಸಿ, ಐಪಿಎಲ್ 2026ರ ಋತುವಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 1.60 ಕೋಟಿ ರೂಪಾಯಿ ನೀಡಿ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಆದರೆ, ಎನ್‌ಒಸಿ ವಿವಾದದಿಂದಾಗಿ ಅವರು ಈ ಬಾರಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಪ್ರಕರಣ ಅಂತ್ಯಗೊಂಡಿದ್ದು, ತುಷಾರ ತಮ್ಮ ಮುಂದಿನ ಕ್ರಿಕೆಟ್ ಭವಿಷ್ಯದ ಮೇಲೆ ಹಾಗೂ ಫಿಟ್ನೆಸ್ ಕಡೆಗೆ ಗಮನಹರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಗ್ಯಾಂಗ್!



















