ಬೆಂಗಳೂರು : ಮೇ 9ರಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಅಭಿಮಾನೋತ್ಸವ ಸಮಾವೇಶ ಭರ್ಜರಿಯಾಗಿ ನಡೆಯಲಿದೆ. ಅವರ ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿಯಾಗಿದೆ.
ಕಾಂಗ್ರೆಸ್‌ನ ಸಿದ್ದರಾಮೋತ್ಸವ ಮಾದರಿಯಲ್ಲಿ ಈ ಅಭಿಮಾನೋತ್ಸವವನ್ನು ಆಯೋಜಿಸಲು ಬಿಜೆಪಿ ಸಜ್ಜಾಗಿದೆ. ಬಿಎಸ್‌ವೈ ಅವರ ಅರ್ಧಶತಮಾನ ರಾಜಕೀಯ ಪಯಣವನ್ನು ಗೌರವಿಸುವ ಉದ್ದೇಶದಿಂದ ಬೃಹತ್ ಅಭಿನಂದನಾ ಸಮಾವೇಶಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಈ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವುದು ಖಚಿತವಾಗಿದ್ದು, ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸಹ ಭಾಗಿಯಾಗುವ ಸಾಧ್ಯತೆ ಇದೆ. ಕೇಂದ್ರ ಹಾಗೂ ರಾಜ್ಯದ ಪ್ರಮುಖ ನಾಯಕರ ದಂಡು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಚಿತ್ರದುರ್ಗದಲ್ಲಿ ಶಕ್ತಿ ಪ್ರದರ್ಶನದ ವೇದಿಕೆಯಾಗಲಿರುವ ಈ ಸಮಾವೇಶಕ್ಕೆ ಈಗಾಗಲೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಸಿ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿದೆ. ಯಡಿಯೂರಪ್ಪ ಕುಟುಂಬ ಹಾಗೂ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ತಂದೆಯ ರಾಜಕೀಯ ವರ್ಚಸ್ಸನ್ನು ಮುಂದುವರಿಸಲು ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸುವ ಪ್ರಯತ್ನಗಳು ಜೋರಾಗಿದೆ. ಮಾಜಿ ಸಿಎಂ ಯಡಿಯೂರಪ್ಪಗೆ ಗೌರವ ಸಲ್ಲಿಸುವ ಈ ಬೃಹತ್ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ.
ಇದನ್ನೂ ಓದಿ : IPLಗಾಗಿ PSL ಬಿಟ್ಟು PCB ಕೆಂಗಣ್ಣಿಗೆ ಗುರಿಯಾದ ದಾಸುನ್ ಶನಕ ; ಒಪ್ಪಂದ ಉಲ್ಲಂಘನೆಗಾಗಿ 1 ವರ್ಷ ನಿಷೇಧ!


















