ಯಾದಗಿರಿ : ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಭೀಕರ ಘಟನೆ ಸಂಭವಿಸಿದೆ. ನಡು ರಸ್ತೆಯಲ್ಲೇ ಬೊಲೆರೊ ವಾಹನ ಧಗಧಗನೆ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸೂಗೂರುನಿಂದ ಭತ್ತದ ಹುಲ್ಲು ಸಾಗಿಸುತ್ತಿದ್ದ ಬೊಲೆರೊ ವಾಹನ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೊಂಗಂಡಿ ಗ್ರಾಮಕ್ಕೆ ಬಂದಾಗ ತೀರಾ ಕೆಳಗೆ ಇದ್ದ ಬೋರ್‌ವೆಲ್ ಸಂಪರ್ಕದ ವಿದ್ಯುತ್ ತಂತಿ ವಾಹನಕ್ಕೆ ತಗುಲಿದೆ.
ವಿದ್ಯುತ್ ತಂತಿ ತಗುಲಿದ ಪರಿಣಾಮ ಕ್ಷಣಾರ್ಧದಲ್ಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ವಾಹನದಲ್ಲಿದ್ದ ಮೂವರು ವ್ಯಕ್ತಿಗಳು ತಕ್ಷಣ ಎಚ್ಚೆತ್ತುಕೊಂಡು ವಾಹನದಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಬೊಲೆರೊ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳೀಯರಲ್ಲಿ ಕೆಲಕಾಲ ಭೀತಿ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಸೂರ್ಯಕುಮಾರ್ ಕಳಪೆ ಫಾರ್ಮ್‌ಗೆ ಅಭಿಮಾನಿಗಳ ಆಕ್ರೋಶ ; MIಗೆ ಹೊರೆಯಾದರೇ ‘ಮಿಸ್ಟರ್ 360’?



















