ಬೆಂಗಳೂರು: ದೇಶದಲ್ಲಿಯೇ ಸಾರ್ವಜನಿಕ ವಲಯದ ಬೃಹತ್ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮವು ಈಗ ಡಿಜಿಟಲ್ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ. ಪಾಲಿಸಿದಾರರು ಹಾಗೂ ಏಜೆಂಟರಿಗಾಗಿ ಎರಡು ಹೊಸ ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗಿದೆ. ಪಾಲಿಸಿದಾರರಿಗಾಗಿ ‘ಮೈ ಎಲ್ಐಸಿ’ (MyLIC) ಮತ್ತು ಏಜೆಂಟರಿಗಾಗಿ ‘ಸೂಪರ್ ಸೇಲ್ಸ್ ಸಾಥಿ’ (Super Sales Saathi) ಎಂಬ ಎರಡು ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ, ಗ್ರಾಹಕರಿಗೆ ಮೈ ಎಲ್ಐಸಿ ಆ್ಯಪ್ ನೂತನ ಡಿಜಿಟಲ್ ಸೇವೆಯನ್ನು ಒದಗಿಸಲಿದೆ.
ಮೈ ಎಲ್ಐಸಿ ಆ್ಯಪ್ ನಲ್ಲಿ ಏನಿದೆ?
ಗ್ರಾಹಕರು ಮೈ ಎಲ್ಐಸಿ ಆ್ಯಪ್ ಮೂಲಕ ಹಲವು ಸೇವೆಗಳನ್ನು ಪಡೆಯಬಹುದು. ಒಂದೇ ವೇದಿಕೆಯಲ್ಲಿ ಎಲ್ಲ ಎಲ್ಐಸಿ ಪಾಲಿಸಿಗಳನ್ನು ನಿರ್ವಹಿಸಬಹುದು. ಪಾಲಿಸಿಯ ಪ್ರೀಮಿಯಂ ಪಾವತಿ ಮಾಡುವುದು, ಪಾಸ್ ಬುಕ್ ಡೌನ್ ಲೋಡ್ ಮಾಡುವುದು, ನೀವು ಕಟ್ಟಿರುವ ಪ್ರೀಮಿಯಂ ಆಧಾರದ ಮೇಲೆ ಸಾಲ ಪಡೆಯವುದು ಸೇರಿ ಹಲವು ಸೇವೆಗಳನ್ನು ನೀಡಲಾಗಿದೆ. ಇದು ಎಐ ಆಧಾರಿತ ಆ್ಯಪ್ ಆಗಿರುವ ಕಾರಣ ಬಳಕೆದಾರ-ಸ್ನೇಹಿ ಆಗಿದೆ.
ಸೂಪರ್ ಸೇಲ್ಸ್ ಸಾಥಿ
ಇದು ಎಲ್ಐಸಿ ಏಜೆಂಟ್ ಗಳು ಮತ್ತು ಮಧ್ಯವರ್ತಿಗಳಿಗಾಗಿ ಅಭಿವೃದ್ಧಿಪಡಿಸಲಾದ ಆ್ಯಪ್ ಆಗಿದೆ. ಏಜೆಂಟ್ ಗಳು ತಮ್ಮ ವ್ಯವಹಾರದ ಪ್ರಗತಿ, ಗ್ರಾಹಕರ ವಿವರಗಳು ಮತ್ತು ಪ್ರೀಮಿಯಂ ನವೀಕರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದು. ಇದು ಕೂಡ ನೂತನ ತಂತ್ರಜ್ಞಾನವನ್ನು ಹೊಂದಿರುವ ಆ್ಯಪ್ ಆಗಿದೆ.
ಎಲ್ಐಸಿ ಪಾಲಿಸಿದಾರರು ಈಗ ಪ್ರೀಮಿಯಂ ಪಾವತಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಎಲ್ಐಸಿ ಕಚೇರಿಗಳಿಗೆ ತೆರಳುವ ಅವಶ್ಯಕತೆ ಇಲ್ಲ. ಎಲ್ಐಸಿಯ ಮೈ ಪಾಲಿಸಿ ಆ್ಯಪ್ ಮೂಲಕವೇ ಮನೆಯಲ್ಲೇ ಕುಳಿತು ಪ್ರೀಮಿಯಂ ಪಾವತಿಸಬಹುದಾಗಿದೆ. ದೇಶದ ವಿಮಾ ಕ್ಷೇತ್ರದಲ್ಲಿ ಹೆಚ್ಚಿನ ಡಿಜಿಟಲ್ ಅಳವಡಿಕೆಯನ್ನು ಉತ್ತೇಜಿಸಲು ಎಲ್ಐಸಿಯು ಹೊಸ ಆ್ಯಪ್ ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರ ಸಮಯ ಉಳಿಯುತ್ತದೆ. ಎಲ್ಐಸಿ ಅಧಿಕಾರಿಗಳ ಮಧ್ಯಸ್ಥಿಕೆಯನ್ನೂ ತಪ್ಪಿಸುತ್ತದೆ.
ಇದನ್ನೂ ಓದಿ: ನಿಮ್ಮ ಮಗುವಿನ 5 ವಯಸ್ಸು ವರ್ಷಕ್ಕಿಂತ ಕಡಿಮೆ ಇದೆಯಾ? ಹಾಗಾದರೆ, ಈ ಸುದ್ದಿ ನಿಮಗಾಗಿ



















