ಧಾರವಾಡ : ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದ್ದು, ಶಿಕ್ಷೆ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗಾಗಲೇ 17 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದ್ದರೂ, ಇಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ಬದಲು ಏಪ್ರಿಲ್ 17ಕ್ಕೆ ಮುಂದೂಡಲಾಗಿದೆ. ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣ ಅಂತಿಮ ಹಂತ ತಲುಪಿದೆ.
ಇಂದು ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಕುರಿತು ವಾದ-ಪ್ರತಿವಾದ ನಡೆದಿದ್ದು, ಈ ವೇಳೆ ಅಪರಾಧಿಗಳೆಲ್ಲರೂ ಕಡಿಮೆ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಂಡರು. ಆರೋಪಿಗಳು ನ್ಯಾಯಾಲಯದ ಮುಂದೆ ಭಾವುಕರಾಗಿ ಕಣ್ಣೀರಿಟ್ಟರು ಎಂದು ತಿಳಿದುಬಂದಿದೆ.
ಈ ವೇಳೆ ಶಾಸಕ ವಿನಯ್ ಕುಲಕರ್ಣಿ ಕೂಡ ತಮ್ಮ ಪರವಾಗಿ ವಾದ ಮಂಡಿಸಿ, “ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾಗಿರುವ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಪ್ರಕರಣ ಹಾಕಲಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಪರಾಧಿಗಳ ವಾದವೇನು?
- ಎ-4, ಎ-14: ಆಟೋ ಮತ್ತು ಕಾರ್ ಚಾಲಕರು; ವಯಸ್ಸಾದ ತಂದೆ-ತಾಯಿಯನ್ನು ಸಾಕುವ ಜವಾಬ್ದಾರಿ ನಮ್ಮ ಮೇಲಿದೆ.
- ಎ-5: ರಿಯಲ್ ಎಸ್ಟೇಟ್ ಉದ್ಯೋಗಿ; ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿಯನ್ನು ನೋಡಿಕೊಳ್ಳಬೇಕು.
- ಎ-9, ಎ-10, ಎ-11: ಪೋಷಕರಿಲ್ಲದ ಅನಾಥರು ಅಥವಾ ವಯಸ್ಸಾದ ತಾಯಿ ಮಾತ್ರ ಇರುವವರು; ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷೆ ಕಡಿಮೆ ಮಾಡಿ.
- ಎ-6, ಎ-12, ಎ-18: ಕೃಷಿಕರು, ಟೈಲರ್ ಮತ್ತು ಗುತ್ತಿಗೆದಾರರು; ಇವರಿಗೆ 4 ರಿಂದ 7 ವರ್ಷದ ಪುಟ್ಟ ಮಕ್ಕಳಿದ್ದಾರೆ ಹಾಗೂ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯಿದೆ.
- ಎ-13: ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ; ತೀವ್ರ ಅನಾರೋಗ್ಯವಿದೆ.
- ಎ-16: ದಂಪತಿಗಳಿಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ; ಇತ್ತೀಚೆಗಷ್ಟೇ ಮೊಮ್ಮಗನ ಸಾವಿನ ನೋವಿನಲ್ಲಿದ್ದಾರೆ.
- ಎ-7: ಆಟೋ ಚಾಲಕ; ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
- ಎ-19 (ಟಿಂಗರಿಕರ್): ಈವರೆಗೆ ಯಾವುದೇ ಕೆಟ್ಟ ದಾಖಲೆಗಳಿಲ್ಲ, ಈ ಹಿಂದೆ ನಗದು ಪ್ರಶಸ್ತಿ ಕೂಡ ಲಭಿಸಿದೆ.
- ಎ-8: ತಂದೆ-ತಾಯಿ ಯಾರೂ ಇಲ್ಲ, ನಾನೊಬ್ಬನೇ ದುಡಿಯುವವನು.
- ಎ-17: ಈತ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ.
ಮುಂದಿರುವ ಸಾಧ್ಯತೆಗಳೇನು?
ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಕ್ಷಮೆಯಿಲ್ಲದ ಜೀವಿತಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಗಳ ಬಗ್ಗೆ ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ನಾಳೆ ಮಧ್ಯಾಹ್ನದ ವೇಳೆಗೆ ನ್ಯಾಯಾಧೀಶರು ಪ್ರತಿಯೊಬ್ಬರ ಪಾತ್ರಕ್ಕೆ ಅನುಗುಣವಾಗಿ ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ : ಇಂದು ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟ : ಜೀವಾವಧಿಯೋ..? ಮರಣ ದಂಡನೆಯೋ..?



















