ಬೆಂಗಳೂರು : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಸಂಸ್ಥೆಯು (PFRDA) ದೇಶದ ಜನರ ಹಿತದೃಷ್ಟಿಯಿಂದ ಹೊಸ ಯೋಜನೆ ಜಾರಿಗೆ ತಂದಿದೆ. ಎನ್‌ಪಿಎಸ್ ಸ್ವಾಸ್ಥ್ಯ (NPS Swasthya) ಯೋಜನೆ ಅಡಿಯಲ್ಲಿ ದೇಶದ ನಾಗರಿಕರು ನಿವೃತ್ತಿಗಾಗಿ ಉಳಿತಾಯ ಮಾಡುವ ಜತೆಗೆ ಆರೋಗ್ಯ ವಿಮೆಯ ಸುರಕ್ಷತೆ ನೀಡಲಾಗುತ್ತಿದೆ. ಇದು ಸಾಮಾನ್ಯ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯೋಜನೆಗಿಂತ ಭಿನ್ನವಾಗಿದೆ.
ಹೊಸ ಯೋಜನೆಯಲ್ಲಿ ಪಿಂಚಣಿ ಉಳಿತಾಯ ಮತ್ತು ಆರೋಗ್ಯ ರಕ್ಷಣೆ ಎರಡೂ ಲಭ್ಯ ಇವೆ. ಸಾಮಾನ್ಯ ಎನ್ಪಿಎಸ್ ನಲ್ಲಿ ಹಣವನ್ನು ಹಿಂಪಡೆಯಲು ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ ‘ಸ್ವಾಸ್ಥ್ಯ’ ಯೋಜನೆಯಲ್ಲಿ ಚಂದಾದಾರರು ತಮ್ಮ ಒಟ್ಟು ವಂತಿಗೆಯ ಶೇ.25 ರಷ್ಟು ಹಣವನ್ನು ಹೊರರೋಗಿ ಅಥವಾ ಒಳರೋಗಿ ವೆಚ್ಚಗಳಿಗಾಗಿ ಯಾವಾಗ ಬೇಕಾದರೂ ಹಿಂಪಡೆಯಬಹುದು. ಈ ಯೋಜನೆಯಲ್ಲಿ ಹಣ ಹಿಂಪಡೆಯಲು ಯಾವುದೇ ಕನಿಷ್ಠ ಕಾಯುವ ಅವಧಿ (ಲಾಕ್-ಇನ್ ಪಿರಿಯಡ್) ಇರುವುದಿಲ್ಲ. ಆದರೆ, ಜನ ಕನಿಷ್ಠ 50 ಸಾವಿರ ರೂ. ಜಮೆ ಮಾಡಿರಬೇಕು.
ಡಿ ಅಸಿಸ್ಟ್ ನಂತಹ ಸಂಸ್ಥೆಗಳ ಸಹಯೋಗದೊಂದಿಗೆ ದೇಶಾದ್ಯಂತ ಇರುವ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯು ಆದಿತ್ಯ ಬಿರ್ಲಾ ಹೆಲ್ತ್ ಇನ್ಶೂರೆನ್ಸ್ ನಂತಹ ಕಂಪನಿಗಳ ಮೂಲಕ ‘ಹೆಲ್ತ್ ಇನ್ಶೂರೆನ್ಸ್ ಟಾಪ್-ಅಪ್’ ಸೌಲಭ್ಯವನ್ನೂ ಒಳಗೊಂಡಿದೆ. ಆರಂಭದಲ್ಲಿ ಕನಿಷ್ಠ 25 ಸಾವಿರ ರೂಪಾಯಿ ಹೂಡಿಕೆ ಮಾಡಬೇಕು ಎಂದು ತಿಳಿಸಲಾಗಿದೆ. ಎನ್ ಪಿಎಸ್ ಖಾತೆ ಹೊಂದಿರುವವರು ಅಥವಾ ಹೊಸದಾಗಿ ಸೇರುವವರು ಇದರ ಲಾಭ ಪಡೆಯಬಹುದು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಎನ್ ಪಿಎಸ್ ಸ್ವಾಸ್ಥ್ಯ ಯೋಜನೆಗೆ ಹಲವು ರೀತಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಎನ್ ಪಿಎಸ್ ಟ್ರಸ್ಟ್ ಅಧಿಕೃತ ವೆಬ್ ಸೈಟ್ ಆಗಿರುವ https://npstrust.org.in ಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು. ಹಾಗೆಯೇ, ಆ್ಯಪ್ ಮೂಲಕವೂ ಯೋಜನೆಗೆ ಸೇರಬಹುದು. MAven ಎಂಬ ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ, ಅಲ್ಲೂ ನೋಂದಣಿ ಸಾಧ್ಯವಿದೆ.
ಇದನ್ನೂ ಓದಿ : ಸನ್‌ರೈಸರ್ಸ್ ಹೈದರಾಬಾದ್‌ಗೆ ಶುಭಸುದ್ದಿ – ತಂಡ ಸೇರಲು ಸಜ್ಜಾದ ಪ್ಯಾಟ್ ಕಮಿನ್ಸ್!



















