ಚಿಕ್ಕಮಗಳೂರು : ಅಂಬೇಡ್ಕರ್ ಜಯಂತಿ ಸಂಭ್ರಮದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 7 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ನಡೆದಿದೆ.
ಮೆರವಣಿಗೆ ನಡೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಜನರ ಗುಂಪಿನೊಳಗೆ ನುಗ್ಗಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ. ಕಾರಿನ ಡಿಕ್ಕಿಯ ತೀವ್ರತೆಗೆ ಸಾನ್ವಿ (7) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆ ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮದಲ್ಲಿರುವ ತನ್ನ ತಂಗಿ ಮನೆಗೆ ಬಂದಿದ್ದಳು.ಅಲ್ಲದೇ ಈ ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಸುಧಾಕರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಗಾಯಾಳು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಈ ಪ್ರಕರಣವು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿಯ ಬೀಮ್ಸ್‌ನಲ್ಲಿ ಮತ್ತೊಂದು ಎಡವಟ್ಟು? ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ


















