ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗುವ ಮೂಲಕ ಅವರು ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿಷೇಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರ ಬದಲು ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಅಭಿಷೇಕ್ ಶರ್ಮಾ ಅವರ ಶೂನ್ಯದ ದಾಖಲೆ
ಸೋಮವಾರ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೋಫ್ರಾ ಆರ್ಚರ್ ಎಸೆದ ಮೊದಲ ಎಸೆತದಲ್ಲೇ ಔಟ್ ಆದರು. ಇದು 2026ರ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಮಾದರಿಯಲ್ಲಿ ಅವರು ದಾಖಲಿಸಿದ 7ನೇ ‘ಡಕ್’ (ಶೂನ್ಯಕ್ಕೆ ಔಟ್) ಆಗಿದೆ. ಈ ಮೂಲಕ ಒಂದು ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಭಾರತೀಯ ಆಟಗಾರ ಎಂಬ ಕುಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2018ರಲ್ಲಿ ರೋಹಿತ್ ಶರ್ಮಾ ಮತ್ತು 2024ರಲ್ಲಿ ಸಂಜು ಸ್ಯಾಮ್ಸನ್ ತಲಾ 6 ಬಾರಿ ಶೂನ್ಯಕ್ಕೆ ಔಟ್ ಆಗಿ ಈ ಪಟ್ಟಿಯಲ್ಲಿದ್ದರು. ಇದೀಗ ಕೇವಲ 18 ಇನಿಂಗ್ಸ್‌ಗಳಲ್ಲಿ 7 ಬಾರಿ ಶೂನ್ಯ ಸುತ್ತಿದೆ ಅಭಿಷೇಕ್, ಈ ಇಬ್ಬರು ಹಿರಿಯ ಆಟಗಾರರನ್ನು ಹಿಂದಿಕ್ಕಿದ್ದಾರೆ.
ವೈಫಲ್ಯದ ಸರಣಿ ಮತ್ತು ಅಭಿಮಾನಿಗಳ ಅಸಮಾಧಾನ
ಅಭಿಷೇಕ್ ಶರ್ಮಾ ಈ ವರ್ಷ ಅದ್ಭುತವಾಗಿ ಆರಂಭಿಸಿದರೂ, ನಂತರದ ದಿನಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಸೋತಿದ್ದಾರೆ. ಟಿ20 ವಿಶ್ವಕಪ್ 2026ರಲ್ಲೂ ಅವರು ಮೂರು ಬಾರಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಐಪಿಎಲ್‌ನ ಪ್ರಸಕ್ತ ಸಾಲಿನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಅವರು ಕೇವಲ 129 ರನ್ ಗಳಿಸಿದ್ದಾರೆ. ಅವರ ಅತಿಯಾದ ಆಕ್ರಮಣಕಾರಿ ಆಟವೇ ಅವರ ವಿಕೆಟ್ ಪತನಕ್ಕೆ ಕಾರಣವಾಗುತ್ತಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ. ಪ್ರತಿಯೊಂದು ಎಸೆತವನ್ನೂ ಬೌಂಡರಿಗಟ್ಟುವ ಭರದಲ್ಲಿ ಅವರು ಅನಗತ್ಯವಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳು ಟೀಕಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಮಿಂಚಿನ ಆಟ
ಇನ್ನೊಂದೆಡೆ, ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್) ಹೊಂದಿರುವ ಅವರು, ಕೇವಲ 4 ಪಂದ್ಯಗಳಲ್ಲಿ 200 ರನ್ ಸಿಡಿಸಿದ್ದಾರೆ. ವಿಶೇಷವೆಂದರೆ, ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹೇಜಲ್‌ವುಡ್ ಅವರಂತಹ ಘಟಾನುಘಟಿ ಬೌಲರ್‌ಗಳನ್ನೂ ಸೂರ್ಯವಂಶಿ ಸಲೀಸಾಗಿ ಎದುರಿಸುತ್ತಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 50 ರಷ್ಟಿದ್ದರೆ, ಸ್ಟ್ರೈಕ್ ರೇಟ್ 266.66ರ ಗಡಿ ದಾಟಿದೆ. ಈ ಅಮೋಘ ಪ್ರದರ್ಶನವೇ ಅಭಿಮಾನಿಗಳು ಅವರನ್ನು ಭಾರತೀಯ ಟಿ20 ತಂಡಕ್ಕೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಲು ಮುಖ್ಯ ಕಾರಣವಾಗಿದೆ.
ತಂಡದ ಆಡಳಿತಕ್ಕೆ ಎದುರಾದ ಸವಾಲು
ಅಭಿಷೇಕ್ ಶರ್ಮಾ ಅವರ ಈ ಕಳಪೆ ಫಾರ್ಮ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾತ್ರವಲ್ಲದೆ, ಭಾರತೀಯ ಆಯ್ಕೆ ಸಮಿತಿಗೂ ತಲೆನೋವಾಗಿ ಪರಿಣಮಿಸಿದೆ. ವಿಶ್ವದ ನಂಬರ್ 1 ಬ್ಯಾಟರ್ ಎಂಬ ಹೆಗ್ಗಳಿಕೆಯಿದ್ದರೂ, ಮಹತ್ವದ ಪಂದ್ಯಗಳಲ್ಲಿ ಅವರು ಶೂನ್ಯಕ್ಕೆ ವಿಕೆಟ್ ಕಳೆದುಕೊಳ್ಳುತ್ತಿರುವುದು ತಂಡದ ಮೇಲೆ ಒತ್ತಡ ಹೇರುತ್ತಿದೆ. ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡು ಲಯಕ್ಕೆ ಮರಳುತ್ತಾರೆಯೇ ಅಥವಾ ಅಭಿಮಾನಿಗಳ ಆಶಯದಂತೆ ವೈಭವ್ ಸೂರ್ಯವಂಶಿಯಂತಹ ಯುವ ಪ್ರತಿಭೆಗಳಿಗೆ ಹಾದಿ ಮಾಡಿಕೊಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಹೈದರಾಬಾದ್ ವೇಗಿಯ ಕನಸಿನ ಪದಾರ್ಪಣೆ : ರಾಜಸ್ಥಾನ ತಂಡ ನಿದ್ದೆಗೆಡಿಸಿದ ವೇಗಿ ಪ್ರಫುಲ್ ಹಿಂಗೆ ಯಾರು?



















