ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷಕ್ಕೆ ತೆರೆ ಎಳೆಯುವ ಉದ್ದೇಶದಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆರಂಭವಾಗಿದ್ದ ಶಾಂತಿ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶ ಕಾಣದೇ ಅಂತ್ಯಗೊಂಡಿವೆ. ಸತತ 21 ಗಂಟೆಗಳ ಕಾಲ ನಡೆದ ಸುದೀರ್ಘ ಸಂಧಾನ ಪ್ರಕ್ರಿಯೆಯು ಅಂತಿಮವಾಗಿ ವಿಫಲವಾಗಿದ್ದು, ಅಮೆರಿಕದ ನಿಯೋಗವು ವಾಷಿಂಗ್ಟನ್‌ಗೆ ಮರಳಲು ನಿರ್ಧರಿಸಿದೆ.
ಪರಮಾಣು ಅಸ್ತ್ರದ ಹಠವೇ ಮುಳುವಾಯಿತೇ?
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಭಾಗವಹಿಸಿತ್ತು. ಮಾತುಕತೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವ್ಯಾನ್ಸ್, ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಯೇ ಈ ಮಾತುಕತೆ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ಪರೋಕ್ಷ ಆರೋಪ ಮಾಡಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಇಚ್ಛೆಯನ್ನು ಕೈಬಿಡುತ್ತದೆಯೇ ಎನ್ನುವ ಪ್ರಶ್ನೆಗೆ “ಇರಾನ್ ಕಡೆಯಿಂದ ನಮಗೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ,” ಎಂದು ಅವರು ಹೇಳಿದ್ದಾರೆ. ಅಮೆರಿಕವು ಇರಾನ್‌ಗೆ ತನ್ನ ‘ಅಂತಿಮ ಮತ್ತು ಅತ್ಯುತ್ತಮ’ ಪ್ರಸ್ತಾವನೆಯನ್ನು ಸಲ್ಲಿಸಿತ್ತು, ಆದರೆ ಇರಾನ್ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ ಎನ್ನಲಾಗಿದೆ.
ಇರಾನ್ ಆರೋಪವೇನು?
ಮತ್ತೊಂದೆಡೆ, ಮಾತುಕತೆ ವೈಫಲ್ಯಕ್ಕೆ ಅಮೆರಿಕದ ‘ಅಸಮಂಜಸ ಬೇಡಿಕೆಗಳೇ’ ಕಾರಣ ಎಂದು ಇರಾನ್ ದೂರಿದೆ. ಇರಾನ್‌ನ ಸರ್ಕಾರಿ ಸ್ವಾಮ್ಯದ ಐಆರ್‌ಐಬಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಮ್ಮ ನಿಯೋಗವು ಇರಾನ್ ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು 21 ಗಂಟೆಗಳ ಕಾಲ ನಿರಂತರವಾಗಿ ಚರ್ಚಿಸಿದೆ. ನಾವು ಹಲವಾರು ಉಪಕ್ರಮಗಳನ್ನು ಮುಂದಿಟ್ಟರೂ, ಅಮೆರಿಕದ ಅವಾಸ್ತವಿಕ ಬೇಡಿಕೆಗಳಿಂದಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ,” ಎಂದು ತಿಳಿಸಿದೆ.
ಟ್ರಂಪ್ ಅವರ ಪ್ಲಾನ್ ‘ಬಿ’ ಇಲ್ಲದ ಅಬ್ಬರ
ಈ ಮಾತುಕತೆಗಳಿಗೂ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಠಿಣ ನಿಲುವನ್ನು ಪ್ರದರ್ಶಿಸಿದ್ದರು. ಒಂದು ವೇಳೆ ಶಾಂತಿ ಮಾತುಕತೆ ವಿಫಲವಾದರೆ ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ನಮಗೆ ಯಾವುದೇ ‘ಪ್ಲಾನ್ ಬಿ’ ಅಗತ್ಯವಿಲ್ಲ. ಇರಾನ್ ಸೇನೆಯು ಈಗಾಗಲೇ ಸೋತಿದೆ. ಅವರ ಕ್ಷಿಪಣಿ ಸಾಮರ್ಥ್ಯ ಮತ್ತು ಉತ್ಪಾದನಾ ಘಟಕಗಳು ಧ್ವಂಸಗೊಂಡಿವೆ. ನಮ್ಮ ಸೇನೆಯು ಅತ್ಯುತ್ತಮ ಕೆಲಸ ಮಾಡಿದೆ,” ಎಂದು ಆತ್ಮವಿಶ್ವಾಸದಿಂದ ನುಡಿದಿದ್ದರು.
ಹೊರ್ಮುಜ್ ಜಲಸಂಧಿಯ ವಿಚಾರ ಮತ್ತು ಸ್ಥಗಿತಗೊಂಡಿರುವ ಇರಾನ್ ಆಸ್ತಿಗಳ ಬಿಡುಗಡೆಯ ಬಗ್ಗೆಯೂ ಚರ್ಚೆಗಳಾಗಿದ್ದರೂ, ಪರಮಾಣು ಅಸ್ತ್ರದ ವಿಚಾರದಲ್ಲಿ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯವು ಸಂಧಾನದ ಹಾದಿಯನ್ನು ಬಂದ್ ಮಾಡಿದೆ. ಸದ್ಯಕ್ಕೆ ಈ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.
ಇದನ್ನೂ ಓದಿ: ಅವಕಾಶ ಸಿಕ್ಕರೆ ಟ್ರಂಪ್ ಹತ್ಯೆಗೂ ಹಿಂಜರಿಯಲ್ಲ ಮೊಜ್ತಬಾ ಖಮೇನಿ – ಬ್ರೆಮ್ಮರ್ ಎಚ್ಚರಿಕೆ



















