ರಾಯಚೂರು: ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಹೆಸರಿನಲ್ಲಿ ಯುವತಿಯನ್ನು ಮೋಸಗೊಳಿಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಂಜಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಯುವಕ ಮತ್ತು ಯುವತಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಕಾಲೇಜು ದಿನಗಳಿಂದಲೇ ಇವರಿಬ್ಬರ ನಡುವೆ ಪ್ರೀತಿ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಸುಮಾರು 8 ರಿಂದ 9 ವರ್ಷಗಳ ಕಾಲ ಸಂಬಂಧ ಮುಂದುವರಿದಿದ್ದು, ಈ ಅವಧಿಯಲ್ಲಿ ಹಲವೆಡೆ ಲಾಡ್ಜ್‌ಗಳಲ್ಲಿ ವಾಸವಿದ್ದುದಲ್ಲದೆ ಮಂತ್ರಾಲಯ ಮತ್ತು ಆಲಮಟ್ಟಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಮದುವೆಯ ವಿಚಾರ ಬಂದಾಗ ಜಾತಿ ಕಾರಣವನ್ನು ಮುಂದಿಟ್ಟುಕೊಂಡು ಯುವಕ ಮಲ್ಲಿಕಾರ್ಜುನ ಮದುವೆಗೆ ನಿರಾಕರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೊಂದ ಯುವತಿ ಮದುವೆಯಾಗುವಂತೆ ಒತ್ತಾಯಿಸಿದರೂ, ಸುಳ್ಳು ನೆಪಗಳನ್ನು ಹೇಳುತ್ತಾ ಯುವಕ ದೂರ ಉಳಿದಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸತ್ತ ಯುವತಿ ಹನುಮಂತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವಕನೊಂದಿಗೆ ಕಳೆದ ಫೋಟೋಗಳು, ವಿಡಿಯೋಗಳು ಹಾಗೂ ಹತ್ತಾರು ಸಂಭಾಷಣೆಗಳ ಆಡಿಯೋ ದಾಖಲೆಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ.
ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ವೇಳೆ ನೊಂದ ಯುವತಿ ತನ್ನನ್ನು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದು, ವಿವಿಧ ಸಂಘ ಸಂಸ್ಥೆಗಳ ಸಹಾಯಕ್ಕೂ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ : ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿ : ಬರೋಬ್ಬರಿ 14 ಕೋಟಿ ಅಕ್ರಮ ಆಸ್ತಿ ಪತ್ತೆ



















