ದೆಹಲಿ : ಐಪಿಎಲ್ 2026ರ 14ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಪಂದ್ಯ ಅಂತಿಮ ಎಸೆತದವರೆಗೆ ಉತ್ಕಂಠೆ ಮೂಡಿಸಿತು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಬೃಹತ್ 211 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಕೇವಲ 1 ರನ್ ಅಂತರದಿಂದ ಸೋಲು ಅನುಭವಿಸಿತು.
ಡೆಲ್ಲಿ ಪರ ಪತುಮ್ ನಿಸಾಂಕಾ 41 ರನ್ ಮತ್ತು ಕೆಎಲ್ ರಾಹುಲ್ 92 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 41 ರನ್ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ರನ್ ಪಡೆಯಲು ವಿಫಲರಾದರು.
ಗುಜರಾತ್ ಪರ ನಾಯಕ ಶುಭ್‌ಮನ್ ಗಿಲ್ 45 ಎಸೆತಗಳಲ್ಲಿ 70 ರನ್ (4 ಬೌಂಡರಿ, 5 ಸಿಕ್ಸರ್) ಬಾರಿಸಿದರು. ಜೊತೆಗೆ ಜೋಸ್ ಬಟ್ಲರ್ 27 ಎಸೆತಗಳಲ್ಲಿ 52 ರನ್ ಹಾಗೂ ವಾಷಿಂಗ್ಟನ್ ಸುಂದರ್ 32 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಡೆಲ್ಲಿ ಪರ ಮುಖೇಶ್ ಕುಮಾರ್ 2 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಈ ಪಂದ್ಯದಲ್ಲಿ ಜೋಸ್ ಬಟ್ಲರ್ ತಮ್ಮ ಟಿ20 ವೃತ್ತಿಜೀವನದಲ್ಲಿ 600 ಸಿಕ್ಸರ್‌ಗಳ ಮಹತ್ವದ ಮೈಲಿಗಲ್ಲು ತಲುಪಿರುವುದು ವಿಶೇಷ ಗಮನ ಸೆಳೆದಿತು.



















