ಮಂಡ್ಯ: ಮೇಕೆಗಳ ಕೊಟ್ಟಿಗೆಗೆ ನುಗ್ಗಿದ ಚಿರತೆ ದಾಳಿ ನಡೆಸಿ ಒಂದು ಮೇಕೆಯನ್ನು ಎಳೆದೊಯ್ದು, ಇನ್ನೂ ಮೂರು ಮೇಕೆಗಳಿಗೆ ಗಾಯಗೊಳಿಸಿದ ಘಟನೆ ಮಂಡ್ಯ ಜಿಲ್ಲೆಯ ದೊಡ್ಡಗಾಡಿಗನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ರೈತ ಅಂದಾನಿಗೌಡ ಅವರ ಮನೆಯಲ್ಲಿ ಇರುವ ಮೇಕೆ ಕೊಟ್ಟಿಗೆಯಲ್ಲಿ ಈ ದಾಳಿ ನಡೆದಿದ್ದು, ಚಿರತೆ ಆಕಸ್ಮಿಕವಾಗಿ ನುಗ್ಗಿ ಮೇಕೆಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಮಾಹಿತಿ ಪ್ರಕಾರ, ಹದಿನೈದು ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿ ಎರಡು ಮೇಕೆಗಳನ್ನು ಕೊಂದು ತಿಂದಿತ್ತು. ಇದೀಗ ಮತ್ತೆ ನಡೆದ ದಾಳಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಕುರಿತು ರೈತ ಅಂದಾನಿಗೌಡ ಅವರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದು, ಚಿರತೆಯನ್ನು ಶೀಘ್ರವಾಗಿ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣವು ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.



















