ಗುವಾಹಟಿ : ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ (RR) ಸೇರಿದ ನಂತರ ಎಂ.ಎಸ್. ಧೋನಿ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸುದೀರ್ಘ 13 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ರವೀಂದ್ರ ಜಡೇಜಾ, ಈ ಬಾರಿ ತಮ್ಮ ಹಳೆಯ ತಂಡವಾದ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. 2008ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದೇ ರಾಜಸ್ಥಾನ್ ತಂಡದ ಮೂಲಕ ಎಂಬುದು ಇಲ್ಲಿ ಗಮನಾರ್ಹ. ಸಿಎಸ್‌ಕೆ ಪರ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಜಡೇಜಾ ಅವರನ್ನು ಚೆನ್ನೈ ತಂಡ ಬಿಡುಗಡೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಧೋನಿ ಅವರ ಫೋನ್ ಸ್ವಿಚ್ ಆಫ್ ಇರುತ್ತದೆ
ತಮ್ಮ ಹಳೆಯ ತಂಡವಾದ ಸಿಎಸ್‌ಕೆ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಜಡೇಜಾ, “ನಾನು ರಾಜಸ್ಥಾನ್ ತಂಡಕ್ಕೆ ಬಂದ ನಂತರ ಮಹೀ ಭಾಯ್ (ಧೋನಿ) ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಯಾವಾಗಲೂ ತಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿರುತ್ತಾರೆ, ಹಾಗಾಗಿ ಅವರ ಸಂಪರ್ಕ ಸಿಗುವುದು ಕಷ್ಟ,” ಎಂದು ಲಘು ದಾಟಿಯಲ್ಲಿ ಹೇಳಿದರು. “ಆದರೆ ಶೀಘ್ರದಲ್ಲೇ ನಾನು ಅವರನ್ನು ಭೇಟಿಯಾಗಲಿದ್ದೇನೆ. ಅಷ್ಟೇ ಅಲ್ಲದೆ ಸುರೇಶ್ ರೈನಾ ಮತ್ತು ಅನಿಲ್ ಕುಂಬ್ಳೆ ಅವರೊಂದಿಗೂ ಮಾತನಾಡಲಿದ್ದೇನೆ,” ಎಂದು ತಿಳಿಸಿದರು.
ಹೊಸ ಅವತಾರದಲ್ಲಿ ಮಿಂಚಿದ ಆಲ್‌ರೌಂಡರ್
ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಜಡೇಜಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡರು. ‘ಬಜ್ ಕಟ್’ ಹೇರ್‌ಸ್ಟೈಲ್‌ನಲ್ಲಿ ಕಣಕ್ಕಿಳಿದ ಅವರು ತಮ್ಮ ಹಳೆಯ ತಂಡದ ಬ್ಯಾಟಿಂಗ್ ಲೈನಪ್ ಅನ್ನು ಧೂಳೀಪಟ ಮಾಡಿದರು. ವಿಶೇಷವಾಗಿ ಸ್ಫೋಟಕ ಬ್ಯಾಟರ್ ಶಿವಂ ದುಬೆ ಅವರ ವಿಕೆಟ್ ಪಡೆಯುವ ಮೂಲಕ ಜಡೇಜಾ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ದುಬೆ ಅವರನ್ನು ಮೂರನೇ ಎಸೆತದಲ್ಲೇ ಔಟ್ ಮಾಡುವ ಮೂಲಕ ಜಡೇಜಾ ತಮ್ಮ ಅನುಭವವನ್ನು ಪ್ರದರ್ಶಿಸಿದರು.
ಬದಲಾವಣೆ ಅನಿವಾರ್ಯ
ತಂಡಗಳ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹೋಗುವುದು ಕಷ್ಟದ ಹಂತ. ಆದರೆ ಇದು ವೃತ್ತಿಜೀವನದ ಒಂದು ಭಾಗ. ಹೊಸ ಗುಂಪಿನೊಂದಿಗೆ ಬೆರೆಯುವುದು, ಅವರಿಂದ ಕಲಿಯುವುದು ಮತ್ತು ನನ್ನ ಅನುಭವವನ್ನು ಹಂಚಿಕೊಳ್ಳುವುದು ಈಗ ನನ್ನ ಮುಂದಿರುವ ಗುರಿ,” ಎಂದು ಜಡೇಜಾ ಹೇಳಿದ್ದಾರೆ.
ಇದನ್ನೂ ಓದಿ : ಹಾವೇರಿಯಲ್ಲಿ ಏಕಾಏಕಿ ಜನರ ಮೇಲೆ ಬಸ್ ನುಗ್ಗಿಸಿದ ಚಾಲಕ.. ನಾಲ್ವರು ಗಂಭೀರ



















