ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಇದರ ನೇರ ಬಿಸಿ ಭಾರತದ ಗ್ರಾಹಕರಿಗೆ ತಟ್ಟುತ್ತಿದೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು(ಬುಧವಾರ) ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿವೆ. 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯು ಪ್ರತಿ ನಗರಗಳಲ್ಲಿ 195 ರಿಂದ 218 ರೂಪಾಯಿಗಳವರೆಗೆ ಹೆಚ್ಚಳ ಕಂಡಿದೆ.
ನಗರವಾರು ಬೆಲೆ ಏರಿಕೆಯ ವಿವರ
ದರ ಪರಿಷ್ಕರಣೆಯ ನಂತರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,883 ರೂಪಾಯಿಗಳಿಂದ 2,078.50 ರೂಪಾಯಿಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿಯೂ 195.5 ರೂಪಾಯಿ ಹೆಚ್ಚಳವಾಗಿದ್ದು, ಹೊಸ ದರ 2,031 ರೂ.ಗೆ ತಲುಪಿದೆ. ಇನ್ನು ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಬೆಲೆ ಏರಿಕೆ ಮತ್ತಷ್ಟು ಹೆಚ್ಚಿದ್ದು ಕ್ರಮವಾಗಿ 218 ಮತ್ತು 203 ರೂಪಾಯಿಗಳಷ್ಟು ಏರಿಕೆಯಾಗಿದೆ. ಇದರೊಂದಿಗೆ ಕೋಲ್ಕತ್ತಾದಲ್ಲಿ ಸಿಲಿಂಡರ್‌ಗೆ 2,208 ರೂಪಾಯಿ ಹಾಗೂ ಚೆನ್ನೈನಲ್ಲಿ 2,246 ರೂ. ಆಗಿದೆ. ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರವಲ್ಲದೆ, 5 ಕೆಜಿಯ ಮಿನಿ ಸಿಲಿಂಡರ್ ಬೆಲೆಯಲ್ಲೂ 51 ರೂ. ಏರಿಕೆ ಮಾಡಲಾಗಿದೆ.
ಯುದ್ಧ ಮತ್ತು ಪೂರೈಕೆ ವ್ಯತ್ಯಯವೇ ಕಾರಣ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ತೈಲ ಪೂರೈಕೆ ಸರಪಳಿಯಲ್ಲಿ ದೊಡ್ಡ ಮಟ್ಟದ ಅಸ್ತವ್ಯಸ್ತ ಉಂಟಾಗಿದೆ. ಯುದ್ಧ ಆರಂಭವಾದಾಗಿನಿಂದ ಜಾಗತಿಕ ತೈಲ ಬೆಲೆ ಶೇ.50 ರಷ್ಟು ಜಿಗಿತ ಕಂಡಿದೆ. ಪ್ರಮುಖವಾಗಿ ಇಂಧನ ಸಾಗಣೆಯ ನಿರ್ಣಾಯಕ ಮಾರ್ಗವಾದ ‘ಹೊರ್ಮುಜ್ ಜಲಸಂಧಿ’ ಮುಚ್ಚಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾನದಂಡಗಳು ಮತ್ತು ರೂಪಾಯಿ ವಿನಿಮಯ ದರವನ್ನು ಪರಿಗಣಿಸಿ ಇಂಡಿಯನ್ ಆಯಿಲ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಈ ದರ ಪರಿಷ್ಕರಣೆ ಮಾಡಿವೆ.
ಗೃಹಬಳಕೆದಾರರಿಗೆ ಸದ್ಯಕ್ಕೆ ರಿಲೀಫ್
ವಾಣಿಜ್ಯ ವಲಯಕ್ಕೆ ಬೆಲೆ ಏರಿಕೆಯ ಶಾಕ್ ನೀಡಲಾಗಿದ್ದರೂ, ಸದ್ಯಕ್ಕೆ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಯಾವುದೇ ದರ ಹೆಚ್ಚಳ ಮಾಡಿಲ್ಲ. ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ ಬೆಲೆ 913 ರೂಪಾಯಿಗಳಲ್ಲೇ ಸ್ಥಿರವಾಗಿದೆ. ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 94.72 ರೂಪಾಯಿ ಹಾಗೂ ಡೀಸೆಲ್ 87.62 ರೂಪಾಯಿಗಳಲ್ಲಿ ಮುಂದುವರಿದಿದೆ. ಆದರೆ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಪ್ರಭಾವ ಬೀರಲಿದ್ದು, ಹೊರಗಿನ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ : ಸೂರ್ಯೋದಯಕ್ಕೂ ಮುನ್ನವೇ ‘ಒರಾಕಲ್’ ಶಾಕ್.. ವಿಶ್ವಾದ್ಯಂತ 30,000 ನೌಕರರ ವಜಾ!



















