ವಿಜಯಪುರ : ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘಟನೆ ನಡೆದಿದೆ.
ಸಿಂದಗಿ ಪಟ್ಟಣದ ಅಲ್ಲಾಪುರ ಲೇಔಟ್‌ನ ಯವಕ ಅಭಿಷೇಕ ಸೈಬಗೌಡ ನಾಗರಳ್ಳಿ (19) ಮೃತ ದುರ್ದೈವಿ. ಲವ್ ಬ್ರೇಕಪ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಕನ್ನೊಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದ ಸರ್ಕಾರಿ ಬಸ್‌ಗೆ ಮೃತ ಅಭಿಷೇಕ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ಗೆ ಬೆಂಕಿ ಹತ್ತಿದೆ. ಬಳಿಕ ಬಸ್ಸಿಗೂ ಬೆಂಕಿ ಆವರಿಸಿಕೊಂಡಿದ್ದು, ಭಾಗಶಃ ಸುಟ್ಟು ಕರಕಲಾಗಿದೆ. ಪರಿಣಾಮ ಬೈಕ್ ಸವಾರ ಸಜೀವ ದಹನವಾಗಿದ್ದಾನೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೂಸೈಡ್ ಮಾಡಿಕೊಳ್ಳಲು ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬಂದು ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಆತ್ಮಹತ್ಯೆಗೂ ಮುನ್ನ ಮೃತ ಅಭಿಷೇಕ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಅದರಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ನಾನು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತೇನೆ. ಅವಳು ನನಗೆ ಬೇಕು, ನನ್ನಿಂದ ಅವಳನ್ನ ದೂರು ಮಾಡಿದವರೆ ನನ್ನ ಸಾವಿಗೆ ಕಾರಣ ಎಂದು ಮೂವರ ಹೆಸರನ್ನು ಉಲ್ಲೇಖಿಸಿ, ಆರೋಪ ಮಾಡಿದ್ದಾನೆ.
ಸದ್ಯ ಲವ್ ಬ್ರೇಕಪ್ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : “ರಾಜಾ ಈಸ್ ಬ್ಯಾಕ್” : ಹನಿಮೂನ್ ವೇಳೆ ಹತ್ಯೆಗೀಡಾಗಿದ್ದ ರಾಜಾ ರಘುವಂಶಿ ಮರುಜನ್ಮ ಪಡೆದನೇ?



















