ಬೆಂಗಳೂರು : ಬೆಂಗಳೂರಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರ ಆಸ್ತಿಗಳನ್ನು ಹರಾಜು ಮಾಡುತ್ತಿರುವ ವೇಳೆ, ಕೆಲ ಸರ್ಕಾರಿ ಕಟ್ಟಡಗಳಲ್ಲಿ ಕೋಟ್ಯಾಂತರ ರೂಪಾಯಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಸಂಬಂಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆಗಳೊಂದಿಗೆ ಜಿಬಿಎ ಮುಖ್ಯ ಆಯುಕ್ತರು ಹಾಗೂ ಕಂದಾಯ ಇಲಾಖೆಯ ವಿಶೇಷ ಆಯುಕ್ತರಿಗೆ ದೂರು ನೀಡಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಮುನ್ನ, 2025 ಆರ್ಥಿಕ ವರ್ಷದ ಅಂತ್ಯಕ್ಕೆ ನಗರದಲ್ಲಿನ ಸರ್ಕಾರಿ ಕಟ್ಟಡಗಳಲ್ಲಿ ಒಟ್ಟು 472.66 ರೂ. ಕೋಟಿ ಸೇವಾ ತೆರಿಗೆ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ.
ಹಿಂದಿನ ಬಿಬಿಎಂಪಿ 8 ವಲಯಗಳಲ್ಲಿ ಮಾತ್ರವೇ 457 ರೂ. ಕೋಟಿ ಹೆಚ್ಚು ಬಾಕಿ ಇದ್ದು, ಪೂರ್ವ ವಲಯದಲ್ಲೇ 246 ರೂ. ಕೋಟಿಗೂ ಹೆಚ್ಚು ತೆರಿಗೆ ಪಾವತಿಯಾಗಿಲ್ಲ. ರಾಜ್ಯದ ಆಡಳಿತ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ರಾಜ ಭವನ, ಕುಮಾರಕೃಪ ಅತಿಥಿ ಗೃಹ ಸೇರಿದಂತೆ ಬಹು ಮಹಡಿ ಕಟ್ಟಡಗಳು 14.94 ರೂ. ಕೋಟಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿವೆ. 2008-09 ರಿಂದಲೇ ಈ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಇಲಾಖೆಗಳು ತೆರಿಗೆ ಪಾವತಿಸದೆ ಬಂದಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಎನ್.ಆರ್. ರಮೇಶ್ “ಸಾಮಾನ್ಯ ಜನರ ಮನೆಗಳನ್ನು ಹರಾಜು ಹಾಕುವ ಮೊದಲು, ಸರ್ಕಾರದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಅವರು ದೊಡ್ಡ ಪ್ರಮಾಣದ ಬಾಕಿ ಉಳಿಸಿಕೊಂಡ ಕಟ್ಟಡಗಳಿಗೆ ಡಿಮ್ಯಾಂಡ್ ನೋಟಿಸ್, ಲೀಗಲ್ ನೋಟಿಸ್ ನೀಡಲು ಮತ್ತು ಅಗತ್ಯವಿದ್ದರೆ ಜಪ್ತಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸರ್ಕಾರಿ ಕಟ್ಟಡಗಳಿಗೆ ಸಡಿಲತೆ, ಸಾಮಾನ್ಯ ಜನರಿಗೆ ಕಠಿಣ ಕ್ರಮ ಎಂಬ ಆರೋಪದ ನಡುವೆ, “ಒಂದೇ ನ್ಯಾಯ – ಒಂದೇ ನಿಯಮ” ಅನುಸರಿಸಬೇಕು ಎಂಬ ಹಿನ್ನಲೆಯಲ್ಲಿ ಈ ಪ್ರಕರಣವು ಸಾರ್ವಜನಿಕ ಚರ್ಚೆಗೆ ಬಂದಿದೆ.
ಇದನ್ನೂ ಓದಿ : ವಾರ್ ಎಫೆಕ್ಟ್ : LPG ಕೊರತೆ – ರಾಜಧಾನಿಯಲ್ಲಿ ಹೋಟೆಲ್ ಮಾರಾಟಕ್ಕೆ ಮುಂದಾದ ಮಾಲೀಕರು



















