ಶಿವಮೊಗ್ಗ : ಆಹಾರ ಅರಸುತ್ತ ಬಂದು ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಕರಡಿಯನ್ನು ಅರಣ್ಯ ಇಲಾಖೆ ಅವರು ಸೆರೆ ಹಿಡಿದಿರುವ ಘಟನೆ ಶಿವಮೊಗ್ಗದ ಸೋಗಾನೆಯಲ್ಲಿ ನಡೆದಿದೆ.
ಇಂದು ಶಿವಮೊಗ್ಗ ತಾಲೂಕು ವಿನಾಯಕನಗರ ಗ್ರಾಮದ ಬಳಿ ಸುಮಾರು 7 ವರ್ಷದ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ತಕ್ಷಣ ಗ್ರಾಮಸ್ಥರು ಉಂಬ್ಳೆಬೈಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು, ಕರಡಿ ಸೆರೆಗೆ ಬಲೆ ಬೀಸಿದ್ದಾರೆ.
ಮೊದಲಿಗೆ ಕರಡಿ ವಿನಾಯಕ ನಗರ ಗ್ರಾಮದಿಂದ ಪಕ್ಕದ ಸೋಗಾನೆ ಏರ್ಪೋರ್ಟ್ ಒಳಗೆ ನುಗ್ಗಿದ್ದು, ನಂತರ ಅಲ್ಲಿನ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅವರು ಓಡಿಸಿಕೊಂಡು ಹೋದ ಪರಿಣಾಮ ಅದು ಪುನಃ ಕಾಂಪೌಂಡ್ ಹಾರಿ ಹೊರಗೆ ಹಾರಿ ಜ್ಯೋತಿನಗರದ ಅಂಗನವಾಡಿ ಬಳಿ ಓಡಿದೆ.
ಈ ವೇಳೆ ತಕ್ಷಣ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ಮುರುಳಿ ಮನೋಹರ್ ಅವರು ತಮ್ಮ ಗನ್ನಿಂದ ಕರಡಿಗೆ ಅರವಳಿಕೆ ಚುಚ್ಚು ಮದ್ದನ್ನು ನೀಡಿದ್ದಾರೆ. ಇದರಿಂದ ಕರಡಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಯನ್ನು ಬಲೆಯಲ್ಲಿ ಹಿಡಿದು ತಮ್ಮ ಲಾರಿಗೆ ಹಾಕಿಕೊಂಡು ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಯಾದಗಿರಿಯ ಇಂದಿರಾ ಕ್ಯಾಂಟಿನ್‌ಗೂ ತಟ್ಟಿದ ಯುದ್ಧದ ಎಫೆಕ್ಟ್!


















