ನವದೆಹಲಿ : ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವ ಆತಂಕದ ಮಧ್ಯೆಯೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಪರಿಣಾಮವಾಗಿ, ಪೆಟ್ರೋಲ್ ಮೇಲಿನ ಕೇಂದ್ರದ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ 3 ರೂಪಾಯಿಗೆ ಇಳಿಕೆಯಾಗಿದ್ದರೆ, ಡೀಸೆಲ್ ಮೇಲಿನ ಸುಂಕ ಸಂಪೂರ್ಣವಾಗಿ ಶೂನ್ಯಕ್ಕೆ ತಲುಪಿದೆ.
ಬೆಲೆ ಇಳಿಕೆ ಆಗುತ್ತಾ?
ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದ್ದರೂ, ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇದರ ನೇರ ಲಾಭ ಸಿಗುವ ಸಾಧ್ಯತೆ ತೀರಾ ಕಡಿಮೆ ಎಂದು ತೈಲ ಉದ್ಯಮದ ಮೂಲಗಳು ತಿಳಿಸಿವೆ. ಪ್ರಸ್ತುತ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಯುಎಸ್ ಡಾಲರ್ ಗಡಿ ದಾಟಿದೆ. ಇದರಿಂದಾಗಿ ತೈಲ ಮಾರಾಟ ಕಂಪನಿಗಳು (OMC) ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಬರೋಬ್ಬರಿ 48.8 ರೂ. ನಷ್ಟ ಅನುಭವಿಸುತ್ತಿವೆ.
ಹೀಗಾಗಿ, ಸುಂಕ ಕಡಿತದ ಹಣವನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು, ತಮ್ಮ ಭಾರಿ ನಷ್ಟವನ್ನು ಸರಿದೂಗಿಸಿಕೊಳ್ಳಲು ಕಂಪನಿಗಳು ಬಳಸಿಕೊಳ್ಳಲಿವೆ ಎನ್ನಲಾಗಿದೆ. ಗಮನಾರ್ಹವೆಂದರೆ, ರಷ್ಯಾದ ರೋಸ್ನೆಫ್ಟ್ ಬೆಂಬಲಿತ ಅತಿ ದೊಡ್ಡ ಖಾಸಗಿ ತೈಲ ಮಾರಾಟ ಕಂಪನಿ ‘ನಯಾರಾ ಎನರ್ಜಿ’ ಗುರುವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5.3 ರೂ. ಮತ್ತು 3 ರೂ.ಗಳಷ್ಟು ಹೆಚ್ಚಿಸಿತ್ತು.
ಜಾಗತಿಕ ಬೆಲೆ ಏರಿಕೆ ನಡುವೆಯೂ ಭಾರತೀಯರಿಗೆ ರಕ್ಷಣೆ
ಜಾಗತಿಕ ವಿದ್ಯಮಾನಗಳ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿರುವುದನ್ನು ಪ್ರಸ್ತಾಪಿಸಿದ್ದಾರೆ. “ಕಳೆದ ಒಂದು ತಿಂಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 70 ಡಾಲರ್‌ನಿಂದ 122 ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಆಗ್ನೇಯ ಏಷ್ಯಾ, ಆಫ್ರಿಕಾ, ಯುರೋಪ್ ಹಾಗೂ ಉತ್ತರ ಅಮೆರಿಕದಾದ್ಯಂತ ತೈಲ ಬೆಲೆಗಳು ಶೇ.20 ರಿಂದ 50ರಷ್ಟು ಹೆಚ್ಚಾಗಿವೆ. ಆದರೆ, ಮೋದಿ ಸರ್ಕಾರವು ಇತರ ರಾಷ್ಟ್ರಗಳಂತೆ ತನ್ನ ನಾಗರಿಕರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುವ ಬದಲು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಈ ಆಘಾತದಿಂದ ಭಾರತೀಯರನ್ನು ರಕ್ಷಿಸಲು ತನ್ನ ಬೊಕ್ಕಸದ ಮೇಲೆಯೇ ಆರ್ಥಿಕ ಹೊರೆಯನ್ನು ಎಳೆದುಕೊಂಡಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಹೊರ್ಮುಜ್ ಜಲಸಂಧಿ ನಿರ್ಬಂಧವೇ ಕಾರಣ
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಕಡಲ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಇದು ಪಶ್ಚಿಮ ಏಷ್ಯಾದಿಂದ ನಡೆಯುವ ತೈಲ ಮತ್ತು ಅನಿಲ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿದ್ದು, ಭಾರತವು ತನ್ನ ಕಚ್ಚಾ ತೈಲದ ಶೇ.40ರಿಂದ 50ರಷ್ಟು (ದಿನಕ್ಕೆ 2.2 ರಿಂದ 2.8 ಮಿಲಿಯನ್ ಬ್ಯಾರೆಲ್) ಹಾಗೂ ಕತಾರ್ ಮತ್ತು ಯುಎಇಯಿಂದ ಅಪಾರ ಪ್ರಮಾಣದ ಎಲ್‌ಎನ್‌ಜಿ (LNG) ಮತ್ತು 33 ಕೋಟಿಗೂ ಹೆಚ್ಚು ಮನೆಗಳಲ್ಲಿ ಬಳಸುವ ಎಲ್‌ಪಿಜಿ (LPG) ಯನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಭಾರತದಲ್ಲಿ ತೈಲ ಮತ್ತು ಅನಿಲ ಕೊರತೆಯಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
ಆದರೆ, ದೇಶದಲ್ಲಿ ಇಂಧನ ಕೊರತೆಯ ವದಂತಿಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಇದು ಜನರಲ್ಲಿ ಆತಂಕ ಸೃಷ್ಟಿಸುವ ಉದ್ದೇಶಪೂರ್ವಕ ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದೆ. ಭಾರತವು ಪ್ರಸ್ತುತ 60 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಮತ್ತು 30 ದಿನಗಳಿಗೆ ಸಾಕಾಗುವಷ್ಟು ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಾಮರ್ಥ್ಯ ಹೊಂದಿದೆ. ಸಂಸತ್ತಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, “ಭಾರತದ ಮೂರು ಆಯಕಟ್ಟಿನ ಮೀಸಲುಗಳಲ್ಲಿ ಪ್ರಸ್ತುತ 3.372 ಮಿಲಿಯನ್ ಟನ್‌ಗಳಷ್ಟು ತೈಲ ಸಂಗ್ರಹವಿದ್ದು, ಇದು ಒಟ್ಟು ಸಾಮರ್ಥ್ಯದ ಮೂರನೇ ಎರಡರಷ್ಟಿದೆ. ತೈಲ ಮಾರಾಟ ಕಂಪನಿಗಳ ಬಳಿ ಇರುವ ಸಂಗ್ರಹವೂ ಸೇರಿದಂತೆ ಒಟ್ಟು 74 ದಿನಗಳಿಗೆ ಆಗುವಷ್ಟು ತೈಲ ಮೀಸಲಿದೆ,” ಎಂದು ವಿವರಿಸಿದ್ದಾರೆ. ಅಲ್ಲದೆ, ಬೇಡಿಕೆಯನ್ನು ಸರಿದೂಗಿಸಲು ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದು ಒಪ್ಪಂದಗಳನ್ನು ಸರ್ಕಾರ ಚುರುಕುಗೊಳಿಸಿದೆ. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಶೇ. 25ರಷ್ಟು ಹೆಚ್ಚಿಸಲು ಆದೇಶಿಸಿದ್ದು, ನಾಗರಿಕರು ಆತಂಕದಿಂದ ಗ್ಯಾಸ್ ಸಿಲಿಂಡರ್ ಹಾಗೂ ಇಂಧನವನ್ನು ಮುಗಿಬಿದ್ದು ಖರೀದಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸಲಹೆ ನೀಡಿದೆ.
ಇದನ್ನೂ ಓದಿ : ನಾಯಕತ್ವದ ಹಾದಿಯಲ್ಲಿ ಕೊಹ್ಲಿಗಿಂತ ಜಿತೇಶ್ ಶರ್ಮಾ ನನಗೆ ಹೆಚ್ಚು ನೆರವಾದರು | ರಜತ್ ಪಾಟಿದಾರ್!



















