ಮಂಗಳೂರು : ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ವಾತಾವರಣದ ಪರಿಣಾಮವಾಗಿ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕದ ನಡುವೆಯೇ ಕಚ್ಚಾತೈಲ ಹಾಗೂ ಎಲ್‌ಪಿಜಿ ಸಾಗಣೆ ಹಡಗುಗಳು ನಿರಂತರವಾಗಿ ಮಂಗಳೂರಿಗೆ ಆಗಮಿಸುತ್ತಿವೆ.
ಇತ್ತೀಚೆಗೆ ಕಚ್ಚಾತೈಲ ಮತ್ತು ಎಲ್‌ಪಿಜಿಯನ್ನು ಹೊತ್ತು ತಂದಿದ್ದ ಹಡಗುಗಳು ನವ ಮಂಗಳೂರು ಬಂದರಿಗೆ ತಲುಪಿದ್ದವು. ಇದರ ಬೆನ್ನಲ್ಲೇ ಇಂದು ಸಂಜೆ ಸುಮಾರು 4 ಗಂಟೆ ವೇಳೆಗೆ ‘ಅಪೊಲೋ ಓಶಿಯನ್’ ಹೆಸರಿನ ಇನ್ನೊಂದು ಎಲ್‌ಪಿಜಿ ಸರಕು ಹಡಗು ನವ ಮಂಗಳೂರು ಬಂದರು ತಲುಪಿದೆ.
ಒಟ್ಟು 40 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಈ ನೌಕೆ ಇದೀಗ ಸುರಕ್ಷಿತವಾಗಿ ಮಂಗಳೂರು ಬಂದರು ತಲುಪಿದ್ದು, ಹಡಗಿನಿಂದ ಎಲ್‌ಪಿಜಿ ಇಳಿಸುವ ಪ್ರಕ್ರಿಯೆಗೆ ಬಂದರು ಅಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಹಡಗಿನಿಂದ ಸರಕು ಇಳಿಸುವ ಕಾರ್ಯವನ್ನು ಹಂತ ಹಂತವಾಗಿ ನಡೆಸಲಾಗುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ದಿನಗಳ ಕಾಲ ಬೇಕಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೂಲತಃ ಈ ಹಡಗು ಮೊದಲು ಗುಜರಾತ್ ಬಂದರಿಗೆ ಆಗಮಿಸಿತ್ತು. ಅಲ್ಲಿ ಅರ್ಧದಷ್ಟು ಎಲ್‌ಪಿಜಿ ಇಳಿಸಿದ ಬಳಿಕ ಉಳಿದ ಪ್ರಮಾಣದ ಎಲ್‌ಪಿಜಿಯನ್ನು ‘ಅಪೊಲೋ ಓಶಿಯನ್’ ಸರಕು ಹಡಗಿನ ಮೂಲಕ ಮಂಗಳೂರಿಗೆ ತರಲಾಗಿದೆ. ಇದೇ ವೇಳೆ, ಶೀಘ್ರದಲ್ಲೇ ಮತ್ತೆರಡು ಕಚ್ಚಾತೈಲ ಹೊತ್ತ ಹಡಗುಗಳು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಅವುಗಳ ಆಗಮನ ದಿನಾಂಕವನ್ನು ಸಂಬಂಧಿತ ಅಧಿಕಾರಿಗಳು ಇನ್ನಷ್ಟೇ ಪ್ರಕಟಿಸಬೇಕಿದೆ.
ಇದನ್ನೂ ಓದಿ : ಸದನದಲ್ಲೂ ಐಪಿಎಲ್ ಕ್ರೇಜ್.. ಮ್ಯಾಚ್ ಟಿಕೆಟ್‌ಗಾಗಿ ಸರ್ಕಾರಕ್ಕೆ ಬೇಡಿಕೆ ಇಟ್ಟ ಶಾಸಕರು!



















