ಬೆಂಗಳೂರು : ನಗರದಲ್ಲಿ ಮತ್ತೆ ಕಸದ ಸಮಸ್ಯೆ ತಲೆದೋರುವ ಸೂಚನೆಗಳು ಕಾಣಿಸುತ್ತಿವೆ. ಘನತ್ಯಾಜ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ಅವರ ನೇತೃತ್ವದಲ್ಲಿ ಇಂದು ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆದಿದ್ದು, ಕಸ ವಿಂಗಡನೆ ವಿಚಾರದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಸಭೆಯ ಬಳಿಕ ಮಾತನಾಡಿದ ಕರೀಗೌಡ, “ನಮ್ಮ ನಿಯಮಗಳ ಪ್ರಕಾರ ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಮತ್ತು ಸ್ಪೆಷಲ್ ಕೇರ್ ಕಸವನ್ನು ಸಾರ್ವಜನಿಕರು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಆದರೆ ಪೌರಕಾರ್ಮಿಕರ ಮಾತಿನ ಪ್ರಕಾರ ಜನರು ಕಸವನ್ನು ಸರಿಯಾಗಿ ಬೇರ್ಪಡಿಸುತ್ತಿಲ್ಲ” ಎಂದು ತಿಳಿಸಿದರು.
ಈ ಹಿನ್ನೆಲೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ. ಲಿಂಕ್ ವರ್ಕ್ಸ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ತಂಡದ ಮೂಲಕ ಈ ಕಾರ್ಯ ನಡೆಯಲಿದೆ. ಏಪ್ರಿಲ್ 1ರಿಂದ ವಿಶೇಷ ಕಾರ್ಯಾಚರಣೆ ಆರಂಭವಾಗಲಿದ್ದು, ಕಸ ವಿಂಗಡನೆ ಮಾಡದವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ದಂಡದ ವಿವರ :
- ಮೊದಲ ಬಾರಿ ತಪ್ಪಿದರೆ ₹500 ದಂಡ
- ಮರು ತಪ್ಪಿದರೆ ₹1000 ದಂಡ
ಅಧಿಕಾರಿಗಳು ಸ್ಪಷ್ಟಪಡಿಸಿದಂತೆ, ನಗರ ನಿವಾಸಿಗಳು ಕಸವನ್ನು ಹಸಿ ಕಸ, ಒಣ ಕಸ, ಸ್ಯಾನಿಟರಿ ವೇಸ್ಟ್ ಹಾಗೂ ಸ್ಪೆಷಲ್ ಕೇರ್ ವೇಸ್ಟ್ ಎಂದು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬೇಕು.
ಇನ್ನೊಂದೆಡೆ, ಗುತ್ತಿಗೆದಾರರ ಸಂಘವು ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗುತ್ತಿಗೆದಾರ ಸುಬ್ರಮಣ್ಯ ಮಾತನಾಡಿ, ಕಸ ಸಂಗ್ರಹಣೆ ಮಾಡುವ ಪೌರಕಾರ್ಮಿಕರ ಮೇಲೆಯೇ ವಿಂಗಡನೆ ಜವಾಬ್ದಾರಿ ಹಾಕಲಾಗುತ್ತಿದೆ. ಇದು ಆಟೋ ಚಾಲಕರು ಮತ್ತು ಹೆಲ್ಪರ್‌ಗಳಿಂದ ಸಾಧ್ಯವಿಲ್ಲ. ಮೂಲದಲ್ಲೇ ಜನರು ಕಸ ಬೇರ್ಪಡಿಸಬೇಕು, ಎಂದು ಹೇಳಿದ್ದಾರೆ.
ಗುತ್ತಿಗೆದಾರರು ಕಸ ಎತ್ತುವುದಿಲ್ಲ ಎಂದು ಹಠ ಹಿಡಿದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ಗೊಂದಲದಿಂದ ನಗರದಲ್ಲಿ ಮತ್ತೆ “ಗಾರ್ಬೇಜ್ ಸಿಟಿ”ಎಂಬ ಮಸಿ ಮರುಕಳಿಸುವ ಆತಂಕವೂ ವ್ಯಕ್ತವಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಸಂಜೆ 4:30ಕ್ಕೆ ಮತ್ತೊಂದು ಸಭೆ ಮುಂದೂಡಲಾಗಿದೆ. ನಗರದ ಕಸದ ನಿರ್ವಹಣೆಯಲ್ಲಿ ಸ್ಪಷ್ಟತೆ ಬರದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : LPG ಬುಕ್ಕಿಂಗ್ ಅಂತರ 35 ದಿನಗಳಿಗೆ ಏರಿಕೆ.. ಈ ಸುದ್ದಿ ನಿಜವೇ? ಇಲ್ಲಿದೆ ನಿಖರ ಮಾಹಿತಿ



















