ಚಿಕ್ಕೋಡಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಮ ಹಳ್ಳೂರಿ ಎಂದು ಗುರುತಿಸಲಾಗಿದ್ದು, ಅವರು ಹಳೇ ಬಸ್ ನಿಲ್ದಾಣದ ಬಳಿ “ಹನುಮಾನ ಹೋಟೆಲ್” ನಡೆಸುತ್ತಿದ್ದರು ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ವಾಣಿಜ್ಯ ಸಿಲಿಂಡರ್ ಸಿಗದ ಕಾರಣ ಹೋಟೆಲ್ ಬಂದ್ ಆಗಿತ್ತು. ಇದರಿಂದ ಆದಾಯ ಸಂಪೂರ್ಣವಾಗಿ ನಿಂತುಹೋಗಿ, ಸಾಲದ ಒತ್ತಡ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ. ಹಣಕಾಸಿನ ಏರುಪೇರು ಮತ್ತು ಬಡ್ಡಿದಾರರ ಕಾಟ ತಾಳಲಾರದೇ ಮನನೊಂದು, ತಮ್ಮದೇ ಹೋಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾರ್ಚ್ ಅಂತ್ಯದ ವೇಳೆಯಲ್ಲಿ ಸಾಲದ ಒತ್ತಡ ತೀವ್ರಗೊಂಡಿದ್ದು, ಹಣ ಹೊಂದಾಣಿಕೆ ಆಗದೇ ನಿರಾಶೆಗೊಂಡಿದ್ದರು ಎನ್ನಲಾಗಿದೆ. ಸ್ಥಳೀಯರು ಘಟನೆಯಿಂದ ಶೋಕ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ :ವದಂತಿಗೆ ಬೆಚ್ಚಿದ ವಾಹನ ಸವಾರರು : ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ಬೆಳಗಾವಿ ಮಂದಿ



















