ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಐಷರಾಮಿ ಕಾರುಗಳ ದರ್ಬಾರ್ ಮುಂದುವರಿದಿದ್ದು, ರಾತ್ರಿ ಸಮಯದಲ್ಲಿ ಡ್ರಿಫ್ಟಿಂಗ್ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕೆಲ ಪುಂಡರು ಐಷರಾಮಿ ಕಾರಿನಲ್ಲಿ ನಿರಂತರವಾಗಿ ಡ್ರಿಫ್ಟಿಂಗ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅದೇ ಸ್ಥಳದಲ್ಲಿ ಎರಡ್ಮೂರು ಬಾರಿ ಕಾರನ್ನು ಸುತ್ತಿಸಿ ಅಪಾಯಕಾರಿ ಸಾಹಸ ತೋರಿದ್ದಾರೆ.
ಈ ಘಟನೆ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಕಾರು ನಿಯಂತ್ರಣ ತಪ್ಪುವಂತೆ ವೇಗವಾಗಿ ತಿರುಗುತ್ತಿರುವುದು ಕಾಣಿಸುತ್ತದೆ. ಬಳಿಕ ಚಾಲಕ ಅತೀವೇಗದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾರ್ವಜನಿಕರ ಸುರಕ್ಷತೆಗೆ ಭೀತಿ ಮೂಡಿಸಿದೆ. ಪೊಲೀಸರು ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಲು ಮುಂದಾಗಿದ್ದು, ಇಂತಹ ಅಪಾಯಕಾರಿ ಡ್ರಿಫ್ಟಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಊರಿಗೆ ಹೋಗಲು ವಾಹನಗಳು ಸಿಕ್ಕಿಲ್ಲವೆಂದು ಸರ್ಕಾರಿ ಬಸ್ಸನ್ನೇ ಕದ್ದೊಯ್ದ ಚಾಲಾಕಿ ಕಳ್ಳ



















