ಬೆಂಗಳೂರು : ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ರಾಜಧಾನಿ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಯುಗಾದಿ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದ್ದು, 108 ಲಿಂಗಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರಿಗಾಗಿ ಬೆಳಗ್ಗೆ 10.30ಕ್ಕೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಸಂಜೆ 6 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿದೆ. ಒಟ್ಟಾರೆ, ಯುಗಾದಿ ಹಬ್ಬದ ಅಂಗವಾಗಿ ನಗರದೆಲ್ಲೆಡೆ ಭಕ್ತಿಭಾವ ಮತ್ತು ಸಂಭ್ರಮ ಮನೆಮಾಡಿದೆ.



















