ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಇದೀಗ ಆಘಾತಕಾರಿ ಬೆಳವಣಿಗೆ ಎದುರಾಗಿದೆ. ಜೈಲಿನ ಮಹಿಳಾ ಖೈದಿಗಳ ಮೇಲೆ ನಡೆಸಿದ ಡ್ರಗ್ಸ್ ಪರೀಕ್ಷೆಯಲ್ಲಿ ಕೆಲವರ ವರದಿಗಳು ಪಾಸಿಟಿವ್ ಬಂದಿದ್ದು, ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಜೈಲುಗಳಲ್ಲಿ ಡ್ರಗ್ಸ್ ಪ್ರವೇಶಕ್ಕೆ ತಡೆಹಿಡಿಯಲು ಕ್ರಮಗಳನ್ನು ಕೈಗೊಂಡಿದ್ದರೂ, ಬ್ಯಾರಕ್‌ಗಳೊಳಗೆ ನಶೀಲ ಪದಾರ್ಥಗಳು ಇನ್ನೂ ಲಭ್ಯವಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಮಹಿಳಾ ಖೈದಿಗಳ ಮೇಲಿನ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿರುವುದು ಈ ಅನುಮಾನಕ್ಕೆ ಬಲ ನೀಡಿದೆ.
ಈ ಹಿನ್ನೆಲೆಯಲ್ಲಿ, ಮಹಿಳಾ ಬ್ಯಾರಕ್‌ಗಳಿಗೆ ಡ್ರಗ್ಸ್ ಹೇಗೆ ತಲುಪುತ್ತಿವೆ ಎಂಬುದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ. ಪುರುಷ ಕೈದಿಗಳಷ್ಟೇ ಅಲ್ಲದೆ, ಮಹಿಳಾ ಕೈದಿಗಳಿಂದಲೂ ಡ್ರಗ್ಸ್ ಬಳಕೆ ನಡೆಯುತ್ತಿರುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ. ಪರೀಕ್ಷಾ ಫಲಿತಾಂಶಗಳನ್ನು ದೃಢೀಕರಿಸಲು ಸೆಕೆಂಡ್ ಓಪೀನಿಯನ್‌ಗಾಗಿ ನಿಮ್ಹಾನ್ಸ್‌ಗೆ ವರದಿ ಕಳುಹಿಸಲಾಗಿದೆ.
ಇನ್ನೊಂದೆಡೆ, ಸುಮಾರು 20 ಕೈದಿಗಳು ಮೂತ್ರ ಮಾದರಿ ನೀಡಲು ನಿರಾಕರಿಸಿರುವುದು ತನಿಖೆಗೆ ಇನ್ನಷ್ಟು ಸಂಕೀರ್ಣತೆ ತಂದಿದೆ. ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬರುತ್ತದೆ ಎಂಬ ಭೀತಿಯಿಂದಲೇ ಅವರು ಯೂರಿನ್ ಸ್ಯಾಂಪಲ್ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಕೆಲವರು ಜೈಲು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದಿದ್ದಾರೆ.
ಸದ್ಯ, ಈ ಕೈದಿಗಳನ್ನು ಮನವೊಲಿಸಿ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದು, ಜೈಲುಗಳಲ್ಲಿ ಡ್ರಗ್ಸ್ ಹಾವಳಿ ಕುರಿತಂತೆ ಗಂಭೀರ ತನಿಖೆ ಮುಂದುವರಿದಿದೆ.



















