ಚಿಕ್ಕಮಗಳೂರು : ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡುವಂತೆ ಚಿಕ್ಕಮಗಳೂರಿನಲ್ಲಿ ನ್ಯಾಯಾಲಯವೊಂದು ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿದ್ದ ವ್ಯಕ್ತಿಗೆ ಕೇವಲ ದಂಡವಷ್ಟೇ ಅಲ್ಲ, ಸಮಾಜಮುಖಿ ಶಿಕ್ಷೆ ವಿಧಿಸುವ ಮೂಲಕ ಪಾಠ ಕಲಿಸಿದೆ. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಡೂರು ತಾಲೂಕಿನ ಬಿಸಲೆಹಳ್ಳಿ ಗ್ರಾಮದ ರಂಜಿತ್ ಕುಮಾರ್ ವಿರುದ್ಧ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕಡೂರು JMFC ನ್ಯಾಯಾಲಯ, ಅಪರೂಪದ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಂತೆ, ಮಾರ್ಚ್ 17ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮರವಂಜಿ ಸರ್ಕಲ್/ಮಲ್ಲೇಶ್ವರ ಸರ್ಕಲ್‌ನಲ್ಲಿ ರಂಜಿತ್ ಕುಮಾರ್ ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಬೋರ್ಡ್ ಹಿಡಿದು ನಿಲ್ಲಬೇಕಾಗಿದೆ. ಇದು ಕೇವಲ ಶಿಕ್ಷೆಯಲ್ಲ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಿಯೂ ಕಾಣಲಾಗಿದೆ.
ಪ್ರಕರಣದ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ನ್ಯಾಯಾಲಯವು ಈ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾನೆಯೇ ಎಂಬುದನ್ನು ಗಮನಿಸಲು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಿದೆ. ಸಂಜೆ 5 ಗಂಟೆಯ ನಂತರ ಈ ಆದೇಶವನ್ನು ಪಾಲಿಸಿದ್ದಾನೆಯೇ ಎಂಬ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಹ ಸೂಚಿಸಲಾಗಿದೆ. ನ್ಯಾಯಾಲಯದ ಈ ವಿಭಿನ್ನ ಕ್ರಮ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಇದನ್ನೂ ಓದಿ : ಕೃಷಿ ಸಚಿವ ಚಲುವರಾಯಸ್ವಾಮಿ ನಾನು ಟೇಬಲ್ ಮೆಟ್ ಅಂತ್ಹೇಳಿ ರೈತರಿಗೆ ದಮ್ಕಿ



















