ಬೆಂಗಳೂರು | 1990ರ ದಶಕದಲ್ಲಿ ಬಿಹಾರ ರಾಜ್ಯದಲ್ಲಿ ಅಪರಾಧ ಎನ್ನುವುದು ವಿಜೃಂಭಿಸಿ ಜನ ನಲುಗಿ ಹೋಗಿದ್ದರು. ಭುಜಬಲ ಇದ್ದವರು ಅಪರಾಧ ಕೃತ್ಯಗಳನ್ನು ವ್ಯವಹಾರಿಕವಾಗಿ ಅಲ್ಲಿ ಬಳಸಿದ್ದರು. ರಾಜಕೀಯ ಪುಢಾರಿಗಳು ಕೈಯಲ್ಲಿ ಬಂದೂಕು ಹಿಡಿದುಕೊಂಡು ಓಡಾಡುವುದು ಸಾಮಾನ್ಯವಾಗಿತ್ತು. ಅಲ್ಲಿ ಗನ್‌ಗಳನ್ನು ಇಟ್ಟುಕೊಂಡು ತಿರುಗುವುದು ಪ್ರತಿಷ್ಠೆಯ ವಿಷಯವಾಗಿತ್ತು. ಈ ಮಧ್ಯೆ ಜಾತಿ ಸಂಘರ್ಷ ಕಾರಣಕ್ಕೆ ರಕ್ತಪಾತ ಪರಾಕಾಷ್ಠೆ ಮೀರಿ ಹೋಗಿತ್ತು. ಆದರೆ, ಕರ್ನಾಟಕ ಮಾತ್ರ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಈಗಲೂ ಕರ್ನಾಟಕವನ್ನು ನಾವು ಹಾಗೆ ಹೇಳುತ್ತೇವೆ. ಆದರೆ, ಸದ್ಯದ ಅಪರಾಧದ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಕರ್ನಾಟಕವು ಗೂಂಡಾ ರಾಜ್ಯವಾಗ್ತಿದೆಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ‘ಸುಶಾಸನ’ದ ಅಗತ್ಯತೆ ಮನಗಾಣುತ್ತಿದೆ.
ಹೌದು.. ರಾಜ್ಯದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ನೀಡಿರುವ 2025ರ ಅಪರಾಧ ಕೃತ್ಯದ ಅಂಕಿ-ಅಂಶಗಳನ್ನು ಗಮನಿಸಿದರೆ ಇಂತಹ ಆತಂಕವೊಂದು ಎಲ್ಲರಲ್ಲೂ ಮನೆ ಮಾಡುತ್ತಿದೆ. ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಎಲ್ಲ ರೀತಿಯ ಅಪರಾಧ ಕೃತ್ಯಗಳ ಸಂಖ್ಯೆ ಬರೋಬ್ಬರಿ 2,02,574 ಆಗಿದೆ. ಇನ್ನೂ ಸೈಬರ್ ಕ್ರೈಮ್ ಪ್ರಕರಣಗಳ ಒಟ್ಟು ಸಂಖ್ಯೆ 43,030. ಈ ಅಂಕಿ-ಸಂಖ್ಯೆಗಳೇ ಈಗ ಜನರನ್ನು ಬೆದರಿಸುತ್ತಿವೆ.
ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ 1,211 ಜನ ಹತ್ಯೆಯಾಗಿದ್ದಾರೆ. ಅಲ್ಲದೇ, 3,245 ಜನರ ಹತ್ಯೆಗೆ ಯತ್ನಿಸಲಾಗಿದೆ. ಕೊಲೆಗೆ ಕಾರಣವೇ ಇಲ್ಲದೆ 125 ಜನ ಸಿಟ್ಟು, ಆಕ್ರೋಶ, ಮಾನಸಿಕತೆ ಸೇರಿದಂತೆ ಇನ್ನಿತರ ಕಾರಣಗಳಿಗೊಳಗಾಗಿ ಹತ್ಯೆಯಾಗಿದ್ದಾರೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವುದು ಕೂಡ ವಿಷಾದನೀಯವಾಗುತ್ತಿದೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳದ ಅಂಕಿ-ಸಂಖ್ಯೆಗಳು ಮನುಕುಲವೇ ತಲೆಕೆಳಗೆ ಮಾಡುವಂತಾಗಿದೆ. ರಾಜ್ಯದಲ್ಲಿ 2025ರಲ್ಲಿ 6 ಆಸಿಡ್ ದಾಳಿ ಪ್ರಕರಣಗಳು ನಡೆದಿವೆ. 557 ಜನ ಅತ್ಯಾಚಾರಕ್ಕೆ ಒಳಗಾಗಿರುವ ಪ್ರಕರಣಗಳು ದಾಖಲಾಗಿವೆ. ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ 249 ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣದಡಿ 4,611 ಪುಟ್ಟ ಕಂದಮ್ಮಗಳು ನಲುಗಿ ಹೋಗಿವೆ ಅಂತಾ ದೂರು ದಾಖಲಾಗಿವೆ. ಅಂದರೆ ಕರ್ನಾಟಕದಲ್ಲೂ ಅತ್ಯಾಚಾರ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ, ಆಸಿಡ್ ನಂತಹ ದಾಳಿಗಳು ಕಳೆದ ವರ್ಷ ಹೆಚ್ಚಾಗಿ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗುತ್ತಿದೆ.
ಇನ್ನುಳಿದಂತೆ ಅಪರಾಧ ಪ್ರಕರಣಗಳ ಅಂಕಿ-ಸಂಖ್ಯೆಗಳನ್ನು ಗಮನಿಸುವುದಾದರೆ, ದೊಡ್ಡ ದರೋಡೆಗೆ ಹೊಂಚು ಹಾಕಿದ್ದ 65 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. 624 ದರೋಡೆ ಪ್ರಕರಣಗಳು ದಾಖಲಾಗಿವೆ. ಚಿನ್ನದ ಸರ ಕಳ್ಳತನದ 461 ಪ್ರಕರಣಗಳು, ವಿವಿಧ ರೀತಿಯ ಹಗಲು ಕಳ್ಳತನ 1,105, ರಾತ್ರಿ ಕಳ್ಳತನ 3,909, ಮನೆ ಕಳ್ಳತನ 1,928, ಸ್ನ್ಯಾಚಿಂಗ್ 544, ಸಣ್ಣ ಕಳ್ಳತನ 17,506, ಕ್ಯಾಟಲ್ ಥೆಪ್ಟ್ಸ್ 545, 5840 ಚೀಟಿಂಗ್ ಕೇಸ್, 304(A), IPC/106 ಕೇಸ್ ಅಡಿ 11,821, 279, 337, 338IPC/281,125(a), 125(b)BNS ನಡಿ 31,662, 4,154 ಕಿಡ್ನಾಪ್, 6 ಆಸಿಡ್ ಅಟ್ಯಾಕ್, 557 ರೇಪ್, ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ 249, 14,736 ಗ್ಯಾಂಬ್ಲಿಂಗ್, ಪೋಕ್ಸೋ ಪ್ರಕರಣದಡಿ 4,611 ಪ್ರಕರಣಗಳು ಸೇರಿದಂತೆ ಒಟ್ಟು 2,02,574 ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿವೆ. ಜನ ಸೈಬರ್ ವಂಚನೆಗೆ ಹೆಚ್ಚೆಚ್ಚು ಒಳಗಾಗುತ್ತಿದ್ದಾರೆ. ಖದೀಮರು ಒಂದಿಲ್ಲೊಂದು ಗಿಮಿಕ್ ನಿಂದ ಜನರನ್ನು ಡಿಜಿಟಲ್ ಅರೆಸ್ಟ್ ಮಾಡಿ ಮೋಸಗೊಳಿಸುತ್ತಿದ್ದಾರೆ. ಹೀಗೆ ರಾಜ್ಯದಲ್ಲಿ 2025ರಲ್ಲಿ ಒಟ್ಟಾರೆ ವಿವಿಧ ರೀತಿಯ ಸೈಬರ್ ಅಪರಾಧಗಳು 43,030ನಷ್ಟು ಪ್ರಕರಣಗಳು ದಾಖಲಾಗಿವೆ. ಇನ್ನಾದರು ಪೊಲೀಸ್ ಇಲಾಖೆ ಸುಶಾಸನಕ್ಕೆ ಸಾಕ್ಷಿಯಾಗುತ್ತಾ ಕಾಯ್ದು ನೋಡಬೇಕಿದೆ.
ಇದನ್ನೂ ಓದಿ : ಒಡಿಶಾದ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. 10 ರೋಗಿಗಳು ಸಾವು!



















